ADVERTISEMENT

ಜನಪ್ರತಿನಿಧಿಗಳ ವಿರುದ್ಧದ ವಿಚಾರಣಾ ನ್ಯಾಯಾಲಯಕ್ಕೆ ಪ್ರವೇಶ ನಿಷಿದ್ಧ!

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2018, 20:21 IST
Last Updated 11 ಅಕ್ಟೋಬರ್ 2018, 20:21 IST

ಬೆಂಗಳೂರು: ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯಕ್ಕೆ ಆರೋಪಿಗಳು, ದೂರುದಾರರು ಹಾಗೂ ವಕೀಲರನ್ನು ಹೊರತುಪಡಿಸಿ ಇತರರಿಗೆ ಪ್ರವೇಶ ನಿರ್ಬಂಧಿಸಲಾಗಿದೆ..!

ನಗರದ ಸಿಟಿ ಸಿವಿಲ್‌ ಕೋರ್ಟ್‌ ಕಟ್ಟಡದಲ್ಲಿರುವ 82ನೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ವಿ. ಪಾಟೀಲ ಹೀಗೆಂದು ಮೌಖಿಕ ಫರ್ಮಾನು ಹೊರಡಿಸಿದ್ದಾರೆ.

ಕಳಂಕಿತ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ಈ ನ್ಯಾಯಾಲಯ ವಿಚಾರಣೆ ನಡೆಸುತ್ತದೆ. ಹಲವು ಪ್ರಮುಖ ರಾಜಕೀಯ ಮುಖಂಡರ
ಪ್ರಕರಣಗಳನ್ನು ಈಗಾಗಲೇ ವಿಲೇವಾರಿ ಮಾಡಿರುವ ಈ ನ್ಯಾಯಾಲಯದಲ್ಲಿ ಪತ್ರಕರ್ತರ ಪ್ರವೇಶಕ್ಕೂ ಕಠಿಣ ನಿರ್ಬಂಧ ಹೇರಲಾಗಿದೆ.

ADVERTISEMENT

ಈ ಕುರಿತಂತೆ ‘ಪ್ರಜಾವಾಣಿ’ ಗುರುವಾರ ಸಿಟಿ ಸಿವಿಲ್‌ ಕೋರ್ಟ್‌ ರಿಜಿಸ್ಟ್ರಾರ್‌ ಜೈಶಂಕರ್ ಅವರನ್ನು ಸಂಪರ್ಕಿಸಿದಾಗ, ‘ಈ ಕುರಿತಂತೆ ನಮಗೆ ಟಿ.ವಿ.ಮಾಧ್ಯಮ ಹಾಗೂ ಪತ್ರಕರ್ತರಿಂದ ದೂರು ಬಂದಿದೆ. ಇದನ್ನು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ವಿವೇಚನಾಧಿಕಾರ: ‘ತಮ್ಮ ಕೋರ್ಟ್‌ ಹಾಲ್‌ ಒಳಗೆ ಯಾರನ್ನು ಬಿಡಬೇಕು ಯಾರನ್ನು ಬಿಡಬಾರದು ಎಂಬುದು ಆಯಾ ನ್ಯಾಯಾಧೀಶರ ವಿವೇಚನೆಗೆ ಬಿಟ್ಟದ್ದು’ ಎನ್ನುವ ವಕೀಲ ಹಷ್ಮತ್‌ ಪಾಷ ಅವರು, ‘ಸಿಆರ್‌ಪಿಸಿ ಕಲಂ 327ರ ಪ್ರಕಾರ ಎಲ್ಲಾ ಕ್ರಿಮಿನಲ್‌ ಪ್ರಕರಣಗಳನ್ನು ಮುಕ್ತವಾಗಿ ವಿಚಾರಣೆ ನಡೆಸಬೇಕು’ ಎಂದು ಪ್ರತಿಪಾದಿಸಿದ್ದಾರೆ.

ಕಳೆದ ವಾರವಷ್ಟೇ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ವಿರುದ್ಧದ ಪ್ರಕರಣದಲ್ಲಿ ಅವರ ಆಪ್ತ ಸಹಾಯಕ ಕೋರ್ಟ್‌ ಹಾಲ್‌ ಒಳಗೆ ಕುಳಿತಿದ್ದಾಗ ನ್ಯಾಯಾಧೀಶರು ಆತನನ್ನು ಉದ್ದೇಶಿಸಿ, ‘ನೀನು ಯಾರು’ ಎಂದು ಕೇಳಿದ್ದಾರೆ. ಆಗ ಆತ, ‘ನಾನು ನಾಗೇಂದ್ರ ಅವರ ಆಪ್ತ ಸಹಾಯಕ’ ಎಂದು ತಿಳಿಸಿದ್ದಕ್ಕೆ ಕುಪಿತರಾದ ನ್ಯಾಯಾಧೀಶರು, ‘ಇಲ್ಯಾಕ ಕುಂತಿ.. ಹೊರಾಗ ನಡೀ.. ಎಂದು ಹೇಳಿ ಕಳುಹಿಸಿದ್ದಾರೆ’ ಎಂಬುದು ಪ್ರತ್ಯಕ್ಷದರ್ಶಿಗಳ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.