ADVERTISEMENT

ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಆತಿಥ್ಯ | ಅಧಿಕಾರಿಗಳ ವಿಚಾರಣೆಗೆ ಸಿಗದ ಅನುಮತಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2024, 23:30 IST
Last Updated 7 ಡಿಸೆಂಬರ್ 2024, 23:30 IST
   

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್‌ ಹಾಗೂ ಇತರೆ ಆರೋಪಿಗಳಿಗೆ ವಿಶೇಷ ಆತಿಥ್ಯ ಸೇರಿದಂತೆ ಮೂರು ಪ್ರತ್ಯೇಕ ಪ್ರಕರಣಗಳ ಸಂಬಂಧ ಜೈಲು ಅಧಿಕಾರಿಗಳ ವಿರುದ್ಧ ತನಿಖೆ ಹಾಗೂ ವಿಚಾರಣೆ ನಡೆಸಲು ಆಗ್ನೇಯ ವಿಭಾಗದ ಡಿಸಿಪಿ ಸಕ್ಷಮ ಪ್ರಾಧಿಕಾರದ (ಪ್ರಾಸಿಕ್ಯೂಷನ್) ಅನುಮತಿ ಕೋರಿ ಪತ್ರ ಬರೆದಿದ್ದು, ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಒಂಬತ್ತಕ್ಕೂ ಹೆಚ್ಚು ಅಧಿಕಾರಿಗಳು ಶಾಮೀಲಾಗಿರುವುದು ಸಾಬೀತಾದ ಬೆನ್ನಲ್ಲೇ ಅವರ ವಿರುದ್ಧ ತನಿಖೆ ಹಾಗೂ ವಿಚಾರಣೆ ನಡೆಸಬೇಕಿದ್ದು, ಅನುಮತಿ ನೀಡುವಂತೆ ಕಾರಾಗೃಹ ಇಲಾಖೆ ಮಹಾನಿರ್ದೇಶಕರು ಮತ್ತು ಗೃಹ ಇಲಾಖೆಗೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಪತ್ರ ಬರೆದಿದ್ದಾರೆ.

ಆದರೆ, ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಕ್ಷಮ ಪ್ರಾಧಿಕಾರದ ಅನುಮತಿ ಬಂದ ಬಳಿಕ ಅಧಿಕಾರಿಗಳ ವಿಚಾರಣೆ ನಡೆಸಿ, ಆರೋಪಪಟ್ಟಿ ಸಲ್ಲಿಸಲಾಗುತ್ತದೆ. ಈ ವಿಚಾರವನ್ನು ಕೋರ್ಟ್ ಗಮನಕ್ಕೂ ತರಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಪ್ರಕರಣ ದಾಖಲಾದ 90 ದಿನದೊಳಗೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಆದರೆ, ದರ್ಶನ್‌ಗೆ ಜೈಲಿನಲ್ಲಿ ಆತಿಥ್ಯ , ಜೈಲಿನಲ್ಲಿ ಮೊಬೈಲ್ ಬಳಕೆ ಹಾಗೂ ಕಾರ್ಯಾಚರಣೆಗೆ ಬಂದ ಸಿಸಿಬಿ ಅಧಿಕಾರಿಗಳನ್ನು ತಡೆದು, ಆರೋಪಿಗಳಿದ್ದ ಬ್ಯಾರಕ್‌ನಿಂದ ಕೆಲ ವಸ್ತುಗಳನ್ನು ಪೆಟ್ಟಿಗೆಯಲ್ಲಿ ಕೊಂಡೊಯ್ದ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಆ.26ರಂದು ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಾಗಿತ್ತು. ಎರಡು ಪ್ರಕರಣದಲ್ಲಿ ನಟ ದರ್ಶನ್ ಪ್ರಮುಖ ಆರೋಪಿ. ಮತ್ತೊಂದು ಪ್ರಕರಣದಲ್ಲಿ ಜೈಲಿನ ಅಧಿಕಾರಿಗಳು ಆರೋಪಿಗಳಾಗಿದ್ದಾರೆ.

ಪ್ರಕರಣಗಳ ವಿಚಾರಣೆಗಾಗಿ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಸೂಚಿಸಲಾಗಿತ್ತು. ದರ್ಶನ್, ವಿಲ್ಸನ್‌ ಗಾರ್ಡನ್ ನಾಗ, ಕುಳ್ಳ ಸೀನಾ, ದರ್ಶನ್ ಮ್ಯಾನೇಜರ್ ನಾಗರಾಜ್, ಮತ್ತೊಬ್ಬ ರೌಡಿಶೀಟರ್ ಜಾನಿ ಅಲಿಯಾಸ್ ಜನಾರ್ಧನ್ ಹಾಗೂ ಜೈಲಿನ ಅಧಿಕಾರಿಗಳ ಹೇಳಿಕೆ ಪಡೆಯಲಾಗಿದೆ.

ಆದರೆ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ, ಕಾರಾಗೃಹ ಇಲಾಖೆಗೆ ವ್ಯಾಪ್ತಿಗೆ ಬರುವುದರಿಂದ ‘ಸಿ’ ಮತ್ತು ‘ಡಿ’ ದರ್ಜೆಯ ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೋರಿ ಕಾರಾಗೃಹ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ. ಜೈಲಿನ ಮುಖ್ಯ ಅಧೀಕ್ಷಕರು, ಅಧೀಕ್ಷಕರು, ಡಿವೈಎಸ್ಪಿ ಹಂತದ ಅಧಿಕಾರಿಗಳ ವಿಚಾರಣೆಗೆ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.