
ಬೆಂಗಳೂರು: ವಿಶೇಷ ಶಾಲೆಗಳ ಮಕ್ಕಳ ಶಿಕ್ಷಣಕ್ಕೆ ಅಗತ್ಯ ಮೂಲಸೌಲಭ್ಯ ಹಾಗೂ ಅನುದಾನ, ಆ ಶಾಲೆಗಳ ಶಿಕ್ಷಕರಿಗೆ ಸಮಾನ ವೇತನ ನೀಡುವಂತೆ ಆಗ್ರಹಿಸಿ, ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ವಿಶೇಷ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಮಕ್ಕಳು ಹಾಗೂ ಪೋಷಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಲವು ದಶಕಗಳಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಕೂಗಿ, ಸರ್ಕಾರದ ಗಮನ ಸೆಳೆದರು.
ಸಂಘದ ಕಾರ್ಯದರ್ಶಿ ವಸಂತಕುಮಾರ್ ಶೆಟ್ಟಿ ಮಾತನಾಡಿ, ‘ಸರ್ಕಾರೇತರ ಸಂಸ್ಥೆಗಳು ನಡೆಸುವ ವಿಶೇಷ ಶಾಲೆಗಳಿಗೆ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ₹9 ಸಾವಿರ ಅನುದಾನ ನೀಡಲಾಗುತ್ತಿದೆ. ವರ್ಷಕ್ಕೆ 10 ತಿಂಗಳು ಮಾತ್ರ ಅನುದಾನ ನೀಡಲಾಗುತ್ತಿದೆ. ಜೀವನ ವೆಚ್ಚ ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಅನುದಾನ ಸಾಲುತ್ತಿಲ್ಲ’ ಎಂದು ಹೇಳಿದರು.
ಸರ್ಕಾರದ ಅನುದಾನಕ್ಕೆ ಒಳಪಟ್ಟ ವಿಶೇಷ ಶಾಲೆಗಳ ಶಿಕ್ಷಕರು ತಿಂಗಳಿಗೆ ₹60 ಸಾವಿರದಿಂದ ₹80 ಸಾವಿರದವರೆಗೆ ವೇತನ ಪಡೆಯುತ್ತಿದ್ದಾರೆ. ಎನ್‌ಜಿಒ ಮೂಲಕ ನಡೆಸಲಾಗುವ ವಿಶೇಷ ಶಾಲೆಗಳ ಶಿಕ್ಷಕರಿಗೆ ಕೇವಲ ₹20,250 ಗೌರವಧನ ಲಭಿಸುತ್ತಿದೆ. ಈ ತಾರತಮ್ಯ ಹೋಗಲಾಡಿಸಿ ಸಮಾನ ವೇತನ ನೀಡುವ ವ್ಯವಸ್ಥೆ ಆಗಬೇಕು ಎಂದು ಕೋರಿದರು.
ಸದ್ಭಾವನಾ ಪ್ರತಿಷ್ಠಾನದ ವಿಶೇಷ ಶಾಲೆಯ ಪ್ರತಿನಿಧಿ ಸಂಜಯ್ ಸಬರದ್ ಮಾತನಾಡಿ, ‘2016–17ರಲ್ಲಿ ನಡೆದ ಸಮೀಕ್ಷೆಯಲ್ಲಿ ಎನ್‌ಜಿಒಗಳು ನಡೆಸುವ ವಿಶೇಷ ಶಾಲೆಗಳು ಸರ್ಕಾರದ ಅನುದಾನಿತ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಸೇವೆ ನೀಡುತ್ತಿವೆ ಎಂಬುದು ದೃಢಪಟ್ಟಿದೆ. ಆದರೂ ಶಿಕ್ಷಕರಿಗೆ ಸಮಾನ ವೇತನ ನೀಡಲು ಸರ್ಕಾರ ಮುಂದಾಗುತ್ತಿಲ್ಲ. ಎನ್‌ಜಿಒಗಳು ನಡೆಸುವ ವಿಶೇಷ ಶಾಲೆಗಳ ಶಿಕ್ಷಕರಿಗೂ ಸರ್ಕಾರದ ಅನುದಾನಿತ ಶಾಲೆಗಳ ಶಿಕ್ಷಕರಿಗೆ ನೀಡುವಂತೆ ಸಮಾನ ವೇತನ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ’ ಎಂದರು.
ರಾಜ್ಯದಲ್ಲಿ ಸುಮಾರು 250 ವಿಶೇಷ ಶಾಲೆಗಳಿದ್ದು, ಅವುಗಳಲ್ಲಿ 180 ಶಾಲೆಗಳು ಮಾತ್ರ ಸರ್ಕಾರದ ಅನುದಾನ ಪಡೆಯುತ್ತಿವೆ. ಉಳಿದ ಸುಮಾರು 70 ವಿಶೇಷ ಶಾಲೆಗಳು ಯಾವುದೇ ಸರ್ಕಾರಿ ನೆರವಿಲ್ಲದೇ ಕಾರ್ಯ ನಿರ್ವಹಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪ್ರತಿಭಟನಕಾರರು ಹೇಳಿದರು.
ಶಿಕ್ಷಕರ ಸಂಘದ ಅಧ್ಯಕ್ಷರಾದ ಕಾಂತಿ ಹರೀಶ್, ಒಕ್ಕೂಟದ ಅಧ್ಯಕ್ಷ ಸೋಮನಾಥ್ ಮಹಾಜನ್ ಶೆಟ್ಟರ್, ಅಪ್ಪುರಾವ್ ಎಂ.ಎಸ್. ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.