ADVERTISEMENT

ವಿಶೇಷ ರೈಲು ಇನ್ನು ಸಾಮಾನ್ಯ ರೈಲು: ಪ್ರಯಾಣಿಕರಿಗೆ ಶೇ30ರಷ್ಟು ಪ್ರಯಾಣದರ ಉಳಿತಾಯ

ಬಾಲಕೃಷ್ಣ ಪಿ.ಎಚ್‌
Published 16 ಅಕ್ಟೋಬರ್ 2025, 0:08 IST
Last Updated 16 ಅಕ್ಟೋಬರ್ 2025, 0:08 IST
ರೈಲು (ಸಾಂದರ್ಭಿಕ ಚಿತ್ರ)
ರೈಲು (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಯಶವಂತಪುರ–ಹೊಸಪೇಟೆ–ವಿಜಯಪುರ ಹಾಗೂ ಬೆಂಗಳೂರು–ಹುಬ್ಬಳ್ಳಿ ವಿಶೇಷ ರೈಲುಗಳು ಸಾಮಾನ್ಯ ರೈಲುಗಳಾಗಿ ಪರಿವರ್ತನೆಗೊಳ್ಳಲಿವೆ. ಪ್ರಯಾಣಿಕರು ಶೇ 30ರಷ್ಟು ಹೆಚ್ಚುವರಿಯಾಗಿ ದರ ಪಾವತಿ ಮಾಡುವುದೂ ಕೊನೆಗೊಳ್ಳಲಿದೆ.

06545/46 ಯಶವಂತಪುರ–ಹೊಸಪೇಟೆ–ವಿಜಯಪುರ ರೈಲು ಮತ್ತು 07339/40 ಬೆಂಗಳೂರು–ಹುಬ್ಬಳ್ಳಿ ರೈಲುಗಳಲ್ಲಿ ಡಿ.14ರ ನಂತರ ಕಾಯ್ದಿರಿಸುವುದನ್ನು ವಾಪಸ್‌ ಪಡೆಯಲಾಗಿದೆ. ಸಾಮಾನ್ಯ ರೈಲುಗಳಾದಾಗ ರೈಲು ಸಂಖ್ಯೆ ಬದಲಾಗಲಿದೆ.

ರೈಲಿಗಾಗಿ ಪ್ರಯಾಣಿಕರು ಬೇಡಿಕೆ ಇಟ್ಟಾಗ ಇಲ್ಲವೇ ಯಾವುದೇ ಮಾರ್ಗದಲ್ಲಿ ರೈಲು ಸಂಚರಿಸಿದರೆ ಯಶಸ್ವಿಗೊಳ್ಳಬಹುದೇ ಎಂದು ಪರೀಕ್ಷಿಸಬೇಕಾದಾಗ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಮೂರು ತಿಂಗಳು ಅಥವಾ ಆರು ತಿಂಗಳು ರೈಲುಗಳು ಸಂಚರಿಸಿದಾಗ ಪ್ರಯಾಣಿಕರ ಸ್ಪಂದನ ಹೇಗಿದೆ ಎಂಬುದು ರೈಲ್ವೆ ಮಂಡಳಿಗೆ ಗೊತ್ತಾಗುತ್ತದೆ. ಪ್ರಯಾಣಿಕರ ಸಂಖ್ಯೆ ನಿರೀಕ್ಷೆಯಷ್ಟು ಇಲ್ಲದೇ ಇದ್ದರೆ ರೈಲು ರದ್ದು ಮಾಡುವ, ಉತ್ತಮ ಸ್ಪಂದನ ದೊರಕಿದರೆ ಸಾಮಾನ್ಯ ರೈಲನ್ನಾಗಿ ಪರಿವರ್ತಿಸುವ ಪದ್ಧತಿ ಇದೆ.

ADVERTISEMENT

ಅದರಂತೆ ಸುರೇಶ್‌ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಗ ಈ ವ್ಯವಸ್ಥೆಯಡಿ 2019ರಲ್ಲಿ ಯಶವಂತಪುರ–ಹೊಸಪೇಟೆ–ವಿಜಯಪುರ, ಬೆಂಗಳೂರು–ಹುಬ್ಬಳ್ಳಿ ವಿಶೇಷ ರೈಲುಗಳಿಗೆ ಚಾಲನೆ ನೀಡಲಾಗಿತ್ತು.

ಆದರೆ, ಕೋವಿಡ್‌ ಕಾಲದ ನಂತರ ಈ ವಿಶೇಷ ರೈಲುಗಳನ್ನು ಸಾಮಾನ್ಯ ರೈಲುಗಳನ್ನಾಗಿ ಪರಿವರ್ತನೆ ಮಾಡದೇ ಹಾಗೇ ಮುಂದುವರಿಸಲಾಯಿತು. ವಿಶೇಷ ರೈಲುಗಳಲ್ಲಿ ಪ್ರಯಾಣದರವು ಸಾಮಾನ್ಯ ರೈಲುಗಳಿಗಿಂತ ಶೇ 30ರಷ್ಟು ಅಧಿಕ ಇರುವುದರಿಂದ ಸತತ ಆರು ವರ್ಷ ಹೆಚ್ಚುವರಿ ದರವನ್ನು ಪ್ರಯಾಣಿಕರು ಪಾವತಿ ಮಾಡಿಕೊಂಡು ಬಂದಿದ್ದರು.

‘ಪ್ರಜಾವಾಣಿ’ ಈ ಬಗ್ಗೆ ಒಂದು ತಿಂಗಳ ಹಿಂದೆ ‘ಆರು ವರ್ಷಗಳಿಂದ ಓಡುತ್ತಿರುವ ವಿಶೇಷ ರೈಲು’ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಈಗ ರೈಲ್ವೆ ಮಂಡಳಿಯಿಂದ ಸಾಮಾನ್ಯ ರೈಲು ಪರಿವರ್ತಿಸುವ ಬಗ್ಗೆ ನೈರುತ್ಯ ರೈಲ್ವೆಗೆ ‘ಹಸಿರು’ ಸೂಚನೆ ರವಾನಿಸಿದೆ.

ನೈರುತ್ಯ ರೈಲ್ವೆಯ ಬೆಂಗಳೂರು, ಹುಬ್ಬಳ್ಳಿ, ಮೈಸೂರು ವಿಭಾಗಗಳಲ್ಲಿ ಸಾರಿಗೆ-ಆಧಾರಿತ ಅಭಿವೃದ್ಧಿ (ಟಿಒಡಿ) ಆಧಾರದಲ್ಲಿ ಸುಮಾರು 20 ವಿಶೇಷ ರೈಲುಗಳು ಸಂಚರಿಸುತ್ತಿವೆ. ‘0’ (ಸೊನ್ನೆ) ಯಿಂದ ಆರಂಭವಾಗುವ ಸಂಖ್ಯೆಯನ್ನು ಹೊಂದಿರುವ ಎಲ್ಲ ರೈಲುಗಳು ವಿಶೇಷ ರೈಲುಗಳಾಗಿವೆ. ಒಂದೊಂದೇ ವಿಶೇಷ ರೈಲನ್ನು ಸಾಮಾನ್ಯ ರೈಲಾಗಿ ಪರಿವರ್ತಿಸಲು ರೈಲ್ವೆ ಮಂಡಳಿ ಕ್ರಮ ಕೈಗೊಳ್ಳುತ್ತಿದೆ. ವಿಜಯಪುರ–ಮಂಗಳೂರು–ವಿಜಯಪುರ ವಿಶೇಷ ರೈಲನ್ನು ಒಂದು ತಿಂಗಳ ಹಿಂದೆ ‍ಪರಿವರ್ತನೆ ಮಾಡಲಾಗಿತ್ತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

‘ನಿರ್ಧಾರ ಆಗಿದೆ’

‘ಯಶವಂತಪುರ–ವಿಜಯಪುರ ರೈಲು ಸಹಿತ ಕೆಲವು ಟಿಒಡಿ ವಿಶೇಷ ರೈಲುಗಳನ್ನು ನಿರಂತರ ಸಂಚರಿಸುವ ಸಾಮಾನ್ಯ ರೈಲುಗಳನ್ನಾಗಿ ಪರಿವರ್ತಿಸಲು ರೈಲ್ವೆ ಮಂಡಳಿ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಅಧಿಸೂಚನೆ ಕೆಲವೇ ದಿನಗಳಲ್ಲಿ ಬರಲಿದೆ. ಸಾಮಾನ್ಯ ರೈಲುಗಳಾದಾಗ ಜನರಿಗೆ ಇನ್ನಷ್ಟು ಪ್ರಯೋಜನವಾಗಲಿದೆ’ ಎಂದು ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್‌ ಕನಮರಡಿ ತಿಳಿಸಿದರು.

ಹಲವು ಸಮಯದ ಪ್ರಯತ್ನ

‘ಐದಾರು ವರ್ಷಗಳಿಂದ ಓಡಾಡುತ್ತಿರುವ ವಿಶೇಷ ರೈಲುಗಳನ್ನು ಪರಿವರ್ತಿಸಿ ಎಂದು ಹಲವು ಸಮಯದಿಂದ ಪ್ರಯತ್ನ ಮಾಡಲಾಗಿತ್ತು. ರೈಲ್ವೆ ಅಧಿಕಾರಿಗಳು ನೈರುತ್ಯ ರೈಲ್ವೆ ಅಧಿಕಾರಿಗಳು ಜನಪ್ರತಿನಧಿಗಳ ಗಮನಕ್ಕೆ ತಂದಿದ್ದೆ. ಈಗ ಅದಕ್ಕೆ ಕಾಲ ಕೂಡಿಬಂದಿದೆ. ಪ್ರಯಾಣಿಕರಿಗೆ ಶೇ 30ರಷ್ಟು ದರ ಉಳಿಯಲಿದೆ. ಇನ್ನು ಅನೇಕ ಉಪಯೋಗಗಳಾಗಿವೆ’ ಎಂದು ರೈಲ್ವೆ ಹೋರಾಟಗಾರ ಕೆ.ಎನ್‌. ಕೃಷ್ಣಪ್ರಸಾದ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.