ADVERTISEMENT

ಲಾಲ್‌ಬಾಗ್‌ನಲ್ಲಿ ‘ಮಿನಿ ಪಶ್ಚಿಮಘಟ್ಟ’ !

ಸಸ್ಯ ಪ್ರಭೇದಗಳ ಅಧ್ಯಯನಕ್ಕೆ ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳಿಗೆ ವೇದಿಕೆ

ಖಲೀಲಅಹ್ಮದ ಶೇಖ
Published 13 ಅಕ್ಟೋಬರ್ 2023, 20:58 IST
Last Updated 13 ಅಕ್ಟೋಬರ್ 2023, 20:58 IST
ಲಾಲ್‌ಬಾಗ್‌ನಲ್ಲಿ ಸಹ್ಯಾದ್ರಿ ಮತ್ತು ಪಶ್ಚಿಮ ಘಟ್ಟದ ವಿವಿಧ ಸಸ್ಯ ಪ್ರಭೇದಗಳ 450ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಪ್ರಜಾವಾಣಿ ಚಿತ್ರ/ ಪುಷ್ಕರ್‌ ವಿ.
ಲಾಲ್‌ಬಾಗ್‌ನಲ್ಲಿ ಸಹ್ಯಾದ್ರಿ ಮತ್ತು ಪಶ್ಚಿಮ ಘಟ್ಟದ ವಿವಿಧ ಸಸ್ಯ ಪ್ರಭೇದಗಳ 450ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಪ್ರಜಾವಾಣಿ ಚಿತ್ರ/ ಪುಷ್ಕರ್‌ ವಿ.   

ಬೆಂಗಳೂರು: ವಿವಿಧ ಬಗೆಯ ಸಸ್ಯಗಳ ತಾಣವಾಗಿರುವ ಲಾಲ್‌ಬಾಗ್‌ನಲ್ಲಿ ಕೆಲವೇ ವರ್ಷಗಳಲ್ಲಿ ಪಶ್ಚಿಮ ಘಟ್ಟದ ಮಾದರಿಯೊಂದು ತಲೆ ಎತ್ತಲಿದೆ.

ಲಾಲ್‌ಬಾಗ್‌ನ ಬಂಡೆ ಹಿಂಭಾಗದಲ್ಲಿರುವ ಆರು ಎಕರೆ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ಕಿರು ಮಾದರಿ ಸೃಷ್ಟಿಯಾಗುತ್ತಿದೆ. ತೋಟಗಾರಿಕೆ ಇಲಾಖೆ ಸಿಬ್ಬಂದಿ ಈಗಾಗಲೇ ಪಶ್ಚಿಮ ಘಟ್ಟದ 132 ಸಸ್ಯ ಪ್ರಭೇದಗಳ 450ಕ್ಕೂ ಹೆಚ್ಚು ಸಸಿಗಳನ್ನು ಅಲ್ಲಿ ನೆಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಲಾಲ್‌ಬಾಗ್‌ಗೆ ಭೇಟಿ ನೀಡುವವರಿಗೆ, ಪಶ್ಚಿಮ ಘಟ್ಟದ ಅಪರೂಪದ ಸಸ್ಯ ವೈವಿಧ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಮಾತ್ರವಲ್ಲ, ವಿದ್ಯಾರ್ಥಿಗಳಿಗೆ, ಪರಿಸರಪ್ರಿಯರಿಗೆ, ಸಸ್ಯಶಾಸ್ತ್ರಜ್ಞರಿಗೆ ಇದೊಂದು ಅಧ್ಯಯನದ ತಾಣವೂ ಆಗಲಿದೆ.

ಲಾಲ್‌ಬಾಗ್‌ನಲ್ಲಿ ಆಗಸ್ಟ್‌ 1ರಂದು ಒಂದು ಪ್ರಭೇದದ ಮೂರು ಸಸಿಗಳನ್ನು ನೆಡಲಾಗಿದ್ದು ಈಗ ಅವು 4 ರಿಂದ 5 ಅಡಿ ಎತ್ತರಕ್ಕೆ ಬೆಳೆದಿವೆ.

ADVERTISEMENT

‘ರಾಜ್ಯದ ಎಂಟು ಜಿಲ್ಲೆಗಳಲ್ಲಿ 596 ಕಿ.ಮೀ. ಉದ್ದಕ್ಕೆ ವ್ಯಾಪಿಸಿರುವ ಪಶ್ಚಿಮ ಘಟ್ಟದ ಒಡಲಲ್ಲಿ 5,900 ಸಸ್ಯ ಪ್ರಬೇಧಗಳಿವೆ. ಇವುಗಳಲ್ಲಿ ಅಳಿವಿನಂಚಿನಲ್ಲಿರುವ 567 ಸಸ್ಯ ಪ್ರಭೇದಗಳನ್ನು ಗುರುತಿಸಲಾಗಿದೆ. ಅಂಥ ಸಸ್ಯಗಳನ್ನು ಲಾಲ್‌ಬಾಗ್‌ನಲ್ಲಿ ಬೆಳೆಸುವ ಮೂಲಕ ಅವುಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ’ ಎಂದು ಲಾಲ್‌ಬಾಗ್‌ ಉದ್ಯಾನದ ಉಪನಿರ್ದೇಶಕಿ ಕುಸುಮಾ ತಿಳಿಸಿದರು.

‘ಎರಡು ವರ್ಷಗಳಿಂದ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿರುವ ಉಡುಪಿ, ಶಿರಸಿ, ಸಿದ್ದಾಪುರ, ಬಿಳಿಗಿರಿರಂಗನ ಬೆಟ್ಟದ ಭಾಗಗಳ ಸಸ್ಯವಿಜ್ಞಾನಿಗಳು, ಅರಣ್ಯ ಅನ್ವೇಷಕರು, ಸಂಶೋಧನಾ ಕೇಂದ್ರ ಮತ್ತು ನರ್ಸರಿಯವರನ್ನು ಸಂಪರ್ಕಿಸಿ 132 ಪ್ರಭೇದದ ಸಸ್ಯಗಳನ್ನು ಸಂಗ್ರಹಿಸಲಾಗಿದೆ. ಇವುಗಳ ಪೈಕಿ 39 ಪ್ರಭೇದಗಳು ಅಳಿವಿನಂಚಿನಲ್ಲಿವೆ’ ಎಂದು ಜೀವವೈವಿಧ್ಯ ಶಾಸ್ತ್ರಜ್ಞ ಕೆ.ಆರ್.ಕೇಶವಮೂರ್ತಿ ಮಾಹಿತಿ ನೀಡಿದರು.

ಕೃತಕ ವಾತಾವರಣ ಸೃಷ್ಟಿ:

ಪಶ್ಚಿಮ ಘಟ್ಟದ ಅರಣ್ಯ ಮಾದರಿ ಸೃಷ್ಟಿಗಾಗಿ ಲಾಲ್‌ಬಾಗ್‌ ಉದ್ಯಾನದಲ್ಲಿ ಜೀವವೈವಿಧ್ಯ ಶಾಸ್ತ್ರಜ್ಞ ಕೆ.ಆರ್. ಕೇಶವಮೂರ್ತಿ ಅವರ ಮಾರ್ಗದರ್ಶನದಲ್ಲಿ ಕೃತಕವಾಗಿ ಪಶ್ಚಿಮಘಟ್ಟದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಸಸ್ಯಗಳ ಬೆಳವಣಿಗೆಗೆ ಅಗತ್ಯವಿರುವ ನೀರಿನ ವ್ಯವಸ್ಥೆಗಾಗಿ ಪ್ರತ್ಯೇಕ ಕೊಳವೆಬಾವಿ ಕೊರೆಸಲಾಗಿದೆ. ಜೊತೆಗೆ,‘ರೇನ್‌ಗನ್‌’ ಅಳವಡಿಸಲಾಗಿದೆ. ಕೊಳವೆಬಾವಿ ನೀರನ್ನು ಬಳಸಿಕೊಂಡು ರೇನ್‌ ಗನ್‌ಗಳ ಮೂಲಕ ಸಸ್ಯಗಳಿಗೆ ದಿನವಿಡೀ ಸಣ್ಣ ಪ್ರಮಾಣದಲ್ಲಿ ನೀರುಣಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕುಸುಮಾ ವಿವರಿಸಿದರು.

‘ಪಶ್ಚಿಮ ಘಟ್ಟದ ಮಾದರಿಯಿರುವ ಸ್ಥಳ ಸಂರಕ್ಷಿತ ಪ್ರದೇಶವಾಗಿದೆ. ಇಲ್ಲಿ ಸಸ್ಯಗಳ ಜೊತೆ ಜತೆಗೆ ಪ್ರಾಣಿ ಹಾಗೂ ಪಕ್ಷಿಗಳ ಸಂಕುಲವೂ ಹೆಚ್ಚಾಗಲಿದ್ದು, ಜೀವವೈವಿಧ್ಯವೂ ವೃದ್ಧಿಯಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪಶ್ಚಿಮಘಟ್ಟಗಳ ಸಸ್ಯಗಳು ಸೇರಿದಂತೆ ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳನ್ನ ಲಾಲ್‌ಬಾಗ್‌ನಲ್ಲಿ ನೆಟ್ಟು ಸಂರಕ್ಷಣೆ ಮಾಡುವುದರ ಮೂಲಕ ಅದನ್ನು ಬೇರೆಡೆಗೆ ವಿಸ್ತರಿಸಲಾಗುವುದು.
– ಕುಸುಮಾ, ಲಾಲ್‌ಬಾಗ್‌ ಉಪನಿರ್ದೇಶಕಿ

ಲಾಲ್‌ಬಾಗ್‌ನಲ್ಲಿ ನಡೆಲಾದ ಅಪರೂಪದ ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಪ್ರಭೇದಗಳು (ಆರ್‌.ಇ.ಟಿ)

*ಗುರಿಗೆ ಮರ (ಬ್ರೈಡೀಲಿಯ ರೆಟ್ಯೂಸ)

* ಹೆಬ್ಬಿದಿರು (ಬ್ಯಾಮ್ಬೂಸಾ ಅರುಂಡಿನೇಸಿಯ)

*ಮುಳ್ಳು ಮುತ್ತಲ (ಅಫನಾಮಿಕ್ಸಿಸ್‌ ಪಾಲಿಸ್ಟಾಕ್ಯ)

* ಒಳ್ಳೆಕುಡಿ (ಮೆಮೆಸಿಲಾನ್‌ ಎಡ್ಯೂಲ್)‌

* ಗೌರಿ ಮರ (ಮೊನೋನ್‌ ಫ್ರಾಗ್ರನ್ಸ್)‌

* ತಗಸೆ ಮಡ್ಡಿ (ಮೊರಿಂಡ ಸಿಟ್ರಿಫೋಲಿಯ)‌

* ಉಳುಗೇರು (ನೋತೋಪೀಜಿಯ ಬೆಡ್ಡೋಮಿಯೈ)

* ಹೆಜ್ಜೆವರಕಲು (ಓಲಿಯಾ ಡೈಯಾಯ್ಕ)

* ಪುತ್ರಂಜೀವ (ಪುತ್ರಂಜೀವ ರಾಕ್ಸಬುರ್ಗಿ)

* ಸಾಲು ದೂಪದ ಮರ (ವಟೀರಿಯ ಇಂಡಿಕ)

* ಜಿಮ್ಮಿ ಮರ (ಕ್ಸಾನ್ತೋಝೈಲಮ್‌ ರೆಟ್ಸ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.