ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಭಾನುವಾರ ‘ಮಹಾಸಂಗ್ರಾಮಿ’ ಪುಸ್ತಕವನ್ನು ವಿದ್ವಾಂಸ ಚಿರಂಜೀವಿ ಸಿಂಘ್ ಲೋಕಾರ್ಪಣೆ ಮಾಡಿದರು. ರಾಜಕೀಯ ವಿಶ್ಲೇಷಕ ಸುಗತ ಶ್ರೀನಿವಾಸ್ ರಾಜು, ಹೋರಾಟಗಾರ ಎಸ್.ಆರ್. ಹಿರೇಮಠ, ಸಾಹಿತಿ ನಟರಾಜ್ ಹುಳಿಯಾರ್, ಲೇಖಕಿ ಪಿ.ಭಾರತಿ ದೇವಿ, ಕೃತಿಕಾರರಾದ ರೂಪ ಹಾಸನ ಇದ್ದರು.
–ಪ್ರಜಾವಾಣಿ ಚಿತ್ರ
ಬೆಂಗಳೂರು: ’ಎಸ್.ಆರ್. ಹಿರೇಮಠ ಅವರ ಹೋರಾಟದ ಪ್ರಭಾವ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ದೇಶವ್ಯಾಪಿ ವಿಸ್ತರಿಸಿದೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಘ್ ಅಭಿಪ್ರಾಯಪಟ್ಟರು.
ರೂಪ ಹಾಸನ ರಚಿಸಿರುವ ಎಸ್.ಆರ್. ಹಿರೇಮಠ ಅವರ ರಚನಾತ್ಮಕ ಪ್ರಯೋಗಗಳ ಬಾಳ್ಕಥನ ‘ಮಹಾಸಂಗ್ರಾಮಿ’ ಕೃತಿಯನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ನಿರಂತರ ಹೋರಾಟ ಮಾಡಿಕೊಂಡು ಬಂದಿರುವ ಹಿರೇಮಠ ಅವರ ಜೀವನ ಚರಿತ್ರೆ ಈ ಮೊದಲೇ ಬರಬೇಕಿತ್ತು. ಈ ಬಾಳ್ಕಥನ ರಚಿಸಲು ಅವರ ಮಾತುಗಳನ್ನು 120 ತಾಸು ರೆಕಾರ್ಡ್ ಮಾಡಿಕೊಂಡಿರುವುದು ಉತ್ತಮ ಸಂಗ್ರಹವಾಗಲಿದೆ’ ಎಂದು ತಿಳಿಸಿದರು.
ರಾಜಕೀಯ ವಿಶ್ಲೇಷಕ ಸುಗತ ಶ್ರೀನಿವಾಸ್‌ರಾಜು ಮಾತನಾಡಿ, ‘ಒಳಿತಿಗಿಂತ ಕೆಡುಕಿನ ಬಗ್ಗೆ ಮಾತನಾಡುವುದೇ ಹೆಚ್ಚು. ಹಿರೇಮಠ ಅವರು ಒಳಿತಿನ ಹರಿವನ್ನು ಹಿಗ್ಗಿಸಲು ಪ್ರಯತ್ನಿಸಿದವರು. ಅವರ ಹೋರಾಟದ ಭಾಷೆಯು ಕಾವ್ಯಾತ್ಮಕವಾದುದು ಅಲ್ಲ. ಸಂವಿಧಾನಾತ್ಮಕವಾದುದು, ರಾಜಕೀಯವಾದುದು’ ಎಂದು ವಿಶ್ಲೇಷಿಸಿದರು.
‘ಕಡಿಮೆ ಸ್ವಾರ್ಥ ಇರುವವರಷ್ಟೇ ಹೋರಾಟ ನಡೆಸಲು ಸಾಧ್ಯ. ಸಂಗ್ರಾಮ ಮತ್ತು ನಿರ್ಮಾಣ ಎರಡನ್ನು ಒಟ್ಟೊಟ್ಟಿಗೆ ಮಾಡಿದ ಹಿರೇಮಠ ಅವರಿಗೆ ಕೇಡು ಯಾವುದು ಎಂಬ ಸ್ಪಷ್ಟ ಅರಿವಿದೆ’ ಎಂದು ಸಾಹಿತಿ ನಟರಾಜ್ ಹುಳಿಯಾರ್ ಹೇಳಿದರು.
ಲೇಖಕಿ ಪಿ. ಭಾರತೀದೇವಿ ಮಾತನಾಡಿ, ‘ತುರ್ತು ಪರಿಸ್ಥಿತಿ, ಐಡಿಯಾಸ್ ಸಂಸ್ಥೆ ಬಗ್ಗೆ ಈ ಕೃತಿಯಲ್ಲಿ ಬಹಳ ವಿವರಗಳಿವೆ. ಆದರೆ, ಗಣಿದೊರೆಗಳನ್ನೇ ಎದುರು ಹಾಕಿಕೊಂಡು ಅವರು ನಡೆಸಿದ ಹೋರಾಟದ ಬಗ್ಗೆ ಅಷ್ಟು ವಿವರಗಳು ಇಲ್ಲ. ಒಬ್ಬ ವ್ಯಕ್ತಿಗೆ ಇಂಥ ಶಕ್ತಿ ಎಲ್ಲಿಂದ ಬಂತು ಎಂಬ ಅಚ್ಚರಿ ನಮ್ಮದು’ ಎಂದರು.
ಸಮಾಜ ಪರಿವರ್ತನಾ ಸಮುದಾಯ, ಜನಾಂದೋಲನ ಮಹಾಮೈತ್ರಿ, ಜನಸಂಗ್ರಾಮ ಪರಿಷತ್, ಅಭಿರುಚಿ ಪ್ರಕಾಶನ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಹೋರಾಟಗಾರ ಎಸ್.ಆರ್. ಹಿರೇಮಠ, ಕೃತಿಕಾರರಾದ ರೂಪ ಹಾಸನ, ಪ್ರಕಾಶಕ ಅಭಿರುಚಿ ಗಣೇಶ್, ಜನಸಂಗ್ರಾಮ ಪರಿಷತ್ತಿನ ರಾಘವೇಂದ್ರ ಕುಷ್ಟಗಿ ಇದ್ದರು.
ಪುಸ್ತಕ ಪರಿಚಯ ಕೃತಿ
ಹೆಸರು: ಮಹಾಸಂಗ್ರಾಮಿ
ಲೇಖಕಿ: ರೂಪ ಹಾಸನ
ಪುಟಗಳು: 464 ದರ: ₹ 600
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.