ADVERTISEMENT

ಲಂಕಾ ಪ್ರವಾಸ ರದ್ದು; ಹೆಚ್ಚಿದ ಹೋಟೆಲ್ ದರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 19:57 IST
Last Updated 23 ಏಪ್ರಿಲ್ 2019, 19:57 IST

ಬೆಂಗಳೂರು: ಬಾಂಬ್‌ ಸ್ಫೋಟದ ಬೆನ್ನಲ್ಲೇ ಶ್ರೀಲಂಕಾ ಪ್ರವಾಸದ ಪ್ಯಾಕೇಜ್‌ಗಳನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ರದ್ದುಪಡಿಸಿದೆ. ಮೇ ಅಂತ್ಯದವರೆಗೂ ಶ್ರೀಲಂಕಾಕ್ಕೆ ಯಾವುದೇ ಪ್ರವಾಸಗಳು ಇರುವುದಿಲ್ಲವೆಂದು ತಿಳಿಸಿದೆ.

ಪ್ರಯಾಣಿಕರನ್ನು ಲಂಕಾ ಪ್ರವಾಸಕ್ಕೆ ಕರೆದೊಯ್ಯಲು ಐಆರ್‌ಸಿಟಿಸಿ ವಿಶೇಷ ಪ್ಯಾಕೇಜ್‌ಗಳನ್ನು ರೂಪಿಸಿತ್ತು. ಅದನ್ನು ಬಳಸಿಕೊಂಡು ಪ್ರಯಾಣಿಕರು ಆಗಾಗ ಪ್ರವಾಸಕ್ಕೆ ಹೋಗಿ ಬರುತ್ತಿದ್ದರು.

ಬಾಂಬ್‌ ಸ್ಫೋಟದಿಂದ ಶ್ರೀಲಂಕಾ ನಲುಗಿ ಹೋಗಿದ್ದು, ಅಲ್ಲಿಗೆ ಪ್ರವಾಸಿಗರನ್ನು ಕರೆದೊಯ್ಯುವುದು ಅಪಾಯಕಾರಿ ಎಂಬುದನ್ನು ಮನಗಂಡಿರುವ ಐಆರ್‌ಸಿಟಿಸಿ, ತಾತ್ಕಾಲಿಕವಾಗಿ ಪ್ರವಾಸಗಳನ್ನು ರದ್ದುಪಡಿಸಿದೆ. ಮುಂಗಡವಾಗಿ ಆಸನ ಕಾಯ್ದಿರಿಸಿದ್ದವರಿಗೆ ಆ ಬಗ್ಗೆ ಮಾಹಿತಿ ನೀಡಿದೆ.

ADVERTISEMENT

ಹೋಟೆಲ್ ದರ ಏರಿಕೆ: ಸ್ಫೋಟದಲ್ಲಿ ವಿದೇಶಿಗರು ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ಪಡೆಯಲು ಸಂಬಂಧಿಕರು ಶ್ರೀಲಂಕಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ.

ಅಲ್ಲಿಯ ಹೋಟೆಲ್‌ಗಳ ಕೊಠಡಿಗಳಿಗೆ ಬೇಡಿಕೆ ಬಂದಿದೆ. ಆದರೆ, ಹೋಟೆಲ್‌ನವರು ದರವನ್ನು ದುಪ್ಪಟ್ಟು ಮಾಡಿದ್ದಾರೆ.

‘ಕೊಲಂಬೊದಲ್ಲಿ ಸಾಮಾನ್ಯ ದಿನಗಳಲ್ಲಿ ₹3 ಸಾವಿರದಿಂದ ₹8 ಸಾವಿರಕ್ಕೆ (ಒಂದು ದಿನಕ್ಕೆ) ಸಿಗುತ್ತಿದ್ದ ಕೊಠಡಿಗಳ ದರ ಈಗ ₹6 ಸಾವಿರದಿಂದ ₹14 ಸಾವಿರ ಆಗಿದೆ’ ಎಂದು ಮೋಹನ್ ಎಂಬುವರು ಟ್ವೀಟ್ ಮಾಡಿದ್ದಾರೆ.

ನಾಗರಾಜ್ ಮೃತದೇಹ ಬೆಂಗಳೂರಿಗೆ

ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಉದ್ಯಮಿ ಎಸ್‌.ಆರ್‌.ನಾಗರಾಜ್ ರೆಡ್ಡಿ ಅವರ ಮೃತದೇಹವನ್ನು ಮಂಗಳವಾರ ರಾತ್ರಿ ಬೆಂಗಳೂರಿಗೆ ತರಲಾಗಿದೆ.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿದ್ದ ಶವವನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಯೊಂದಕ್ಕೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿಂದಲೇ ಬುಧವಾರ ಬೆಳಿಗ್ಗೆ ಮೃತದೇಹವನ್ನು ಬಿಟಿಎಂ ಲೇಔಟ್‌ನಲ್ಲಿರುವ ಮನೆಗೆ ತೆಗೆದುಕೊಂಡು ಹೋಗಲಾಗುವುದು‘ ಎಂದು ಸಂಬಂಧಿಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.