
ನಗರದಲ್ಲಿ ಭಾನುವಾರ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜ ಜಯಂತಿ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರಾದ ಎಂ. ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ಅವರಿಗೆ ಎಸ್‌ಎಸ್‌ಕೆ ಸಮಾಜದ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.
ಬೆಂಗಳೂರು: ‘ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ(ಎಸ್‌ಎಸ್‌ಕೆ) ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ದಿ ದೃಷ್ಟಿಯಿಂದ ಪ್ರತ್ಯೇಕ ನಿಗಮ ಸ್ಥಾಪನೆ, ಸಮಾಜದ ಭವನ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಎರಡು ಎಕರೆ ಜಾಗ ಮಂಜೂರು ಮಾಡಿಸಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ’ ಎಂದು ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಭರವಸೆ ನೀಡಿದರು.
ಎಬಿಎಸ್‌ಎಸ್‌ಕೆ ಸಮಾಜ, ಎಸ್‌ಎಸ್‌ಕೆ ಸಂಘ, ಎಸ್‌ಎಸ್‌ಕೆ ಕೋ ಆಪರೇಟಿವ್ ಸೊಸೈಟಿ ಸಹಯೋಗದೊಂದಿಗೆ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜ ಜಯಂತಿ ಸಮಿತಿ ಭಾನುವಾರ ಇಲ್ಲಿ ಆಯೋಜಿಸಿದ್ದ ಸಹಸ್ರಾರ್ಜುನ ಮಹಾರಾಜರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
‘ಕರ್ನಾಟಕದಲ್ಲಿ ಎಸ್‌ಎಸ್‌ಕೆ ಸಮಾಜದವರ ಜನಸಂಖ್ಯೆ ಅಂದಾಜು 8 ಲಕ್ಷದಷ್ಟಿದೆ. ಬೆಂಗಳೂರಿನಲ್ಲಿ 80 ಸಾವಿರಕ್ಕೂ ಅಧಿಕ ಮಂದಿ ನೆಲಸಿದ್ದಾರೆ. ವ್ಯಾಪಾರ, ವಹಿವಾಟಿನಲ್ಲಿ ತೊಡಗಿರುವ ಈ ಸಮಾಜದಲ್ಲೂ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ. ಬೇಡಿಕೆಗಳಿಗೆ ಅನುಗುಣವಾಗಿ ಸಮುದಾಯಕ್ಕೆ ಸೌಲಭ್ಯ ಒದಗಿಸಲು ಎಲ್ಲ ರೀತಿಯ ಸಹಕಾರ ನೀಡುತ್ತೇನೆ’ ಎಂದರು.
ಶಾಸಕ ಪ್ರಿಯಕೃಷ್ಣ ಮಾತನಾಡಿ, ‘ಎಸ್‌ಎಸ್‌ಕೆ ಸಮಾಜದವರು ಸಂಘಟಿತರಾಗಿ ಬೆಂಗಳೂರಿನಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸುತ್ತಿರುವುದು ಸ್ತುತ್ಯಾರ್ಹ. ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ, ಹಿರಿಯರಿಗೆ ಗೌರವ ಸಲ್ಲಿಕೆ, ವ್ಯಾಪಾರಕ್ಕೆ ಪೂರಕವಾಗಿ ಮಾರಾಟಮೇಳ ಆಯೋಜನೆ ಮಾಡುವ ನೆಪದಲ್ಲಿ ಎಲ್ಲರೂ ಒಂದು ದಿನ ಸೇರಿ ಸಂಭ್ರಮದಿಂದ ಕಳೆಯುವ ಸಂಪ್ರದಾಯವು ಮಾದರಿಯಾಗಿದೆ’ ಎಂದು ಮೆಚ್ಚುಗೆ ಸೂಚಿಸಿದರು.
ಎಸ್‌ಎಸ್‌ಕೆ ಸಂಘದ ಅಧ್ಯಕ್ಷ ಎಸ್.ಅನಂತ್ ಮಾತನಾಡಿ, ‘ಸರ್ಕಾರ ಎಲ್ಲಾ ಸಮುದಾಯಗಳಿಗೂ ಭವನ ನಿರ್ಮಿಸಲು ಜಾಗ, ಅನುದಾನ ನೀಡುತ್ತಾ ಬಂದಿದ್ದು, ನಮ್ಮ ಸಮಾಜಕ್ಕೂ ಅನುದಾನ ಒದಗಿಸಬೇಕು. ನಿಗಮ– ಮಂಡಳಿಯ ಬೇಡಿಕೆ ಹಲವು ವರ್ಷಗಳಿಂದ ಇದ್ದು ಇದನ್ನು ಆದಷ್ಟು ಬೇಗನೇ ಆರಂಭಿಸಬೇಕು’ ಎಂದು ಮನವಿ ಮಾಡಿದರು.
‘ರಾಜ್ಯ ಸರ್ಕಾರವೇ ಎಲ್ಲ ದಾರ್ಶನಿಕರ ಜಯಂತಿಗಳನ್ನು ಆಚರಿಸುತ್ತಾ ಬರುತ್ತಿದೆ. ಅದೇ ರೀತಿ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ಆಚರಣೆಗೆ ಬಜೆಟ್‌ನಲ್ಲಿ ₹1 ಕೋಟಿ ಒದಗಿಸಬೇಕು. ರಾಜಕೀಯ ಪಕ್ಷಗಳು ನಮ್ಮ ಸಮಾಜದ ಯುವಕರಿಗೆ ಪ್ರಾತಿನಿಧ್ಯ ನೀಡಬೇಕು’ ಎಂದು ಹೇಳಿದರು.
ಎಬಿಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಶ್ರೀನಿವಾಸ ಶ್ರೀಹರಿಖೋಡೆ, ಎಸ್ಎಸ್‌ಕೆ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷೆ ಕೆ.ಹೇಮಾವತಿ, ಸಮಾಜದ ಉಪಾಧ್ಯಕ್ಷ ಡಮಾಮ್ ವಿ.ಸತ್ಯನಾರಾಯಣ, ಬ್ರಿಜ್ ಮೋಹನ್ ಖೋಡೆ, ಎಸ್. ದೋಂಡೂಸಾ ಧರ್ಮ ಸಂಸ್ಥೆಯ ಎಸ್.ಎನ್.ಶ್ರೀನಿವಾಸಮೂರ್ತಿ, ಎಸ್‌ಡಿಎಂ ಸ್ವಾಮಿ, ಕಬಾಡಿ ರಾಮಚಂದ್ರ ಸಾ, ಡಿ.ಎಚ್.ನಾರಾಯಣ ಸಾ, ಜಯಂತಿ ಸಮಿತಿ ಸಂಚಾಲಕರಾದ ಎಂ.ಎನ್.ರಾಮ್, ಕೆ.ವಸಂತ್, ಖಜಾಂಚಿ ಎಂ.ಸಿ.ಉಮಾ ಶಂಕರ್, ಸುನೀಲ್, ವೆಂಕಟೇಶ ಕಲಬುರಗಿ, ಜಯಪ್ರಕಾಶ್ ವಘೇಲ್ ಉಪಸ್ಥಿತರಿದ್ದರು.
ಗಮನ ಸೆಳೆದ ಸಾಂಸ್ಕೃತಿಕ ಚಟುವಟಿಕೆ
ಬೆಳಿಗ್ಗೆ 10ರಿಂದಲೇ ಎಸ್‌ಎಸ್‌ಕೆ ಸಮಾಜದ ಮಕ್ಕಳು ಮಹಿಳೆಯರು ಹಿರಿಯರು ಗಣ್ಯರ ಸಂಗಮದಂತಿತ್ತು ಕಾರ್ಯಕ್ರಮ. ಸಹಸ್ರಾರ್ಜುನ ಮಹಾರಾಜರ ಇತಿಹಾಸ ಅವರ ಮಹತ್ವದ ಕುರಿತು ಮಾಹಿತಿಯನ್ನೂ ನೀಡಲಾಯಿತು. ಮಕ್ಕಳಿಗೆ ಚಿತ್ರಕಲೆ ಫ್ಯಾಷನ್ ಶೋ ಏರ್ಪಡಿಸಲಾಗಿತ್ತು. ವಿವಿಧ ವೇಷದಲ್ಲಿ ಮಕ್ಕಳು ಮಿಂಚಿ ಬಹುಮಾನ ಪಡೆದರು. 80 ವರ್ಷ ದಾಟಿದ ನಾಲ್ವರು ಹಿರಿಯರನ್ನು ಗೌರವಿಸಲಾಯಿತು. ಸಂಜೆ ನಂತರ 47 ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಯಸ್ಸಿನ ಮಿತಿ ಇಲ್ಲದೇ ಎಲ್ಲರೂ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗಿಯಾದರು. ಉದ್ಯಮಶೀಲತೆ ಬೆಳೆಸಲು ಆಯೋಜಿಸಿದ್ದ ಮಾರಾಟ ಮೇಳದ 50 ಮಳಿಗೆಗಳಲ್ಲಿ ಉತ್ಪನ್ನಗಳ ಮಾರಾಟ ಖರೀದಿ ಭರಾಟೆಯೂ ಜೋರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.