ADVERTISEMENT

ದೃಷ್ಟಿದೋಷವುಳ್ಳ ವಿದ್ಯಾರ್ಥಿನಿ ಚಿನ್ಮಯಿಗೆ ಎಸ್ಎಸ್‌ಎಲ್‌ಸಿಯಲ್ಲಿ ಶೇ 98 ಅಂಕ

​ಪ್ರಜಾವಾಣಿ ವಾರ್ತೆ
Published 9 ಮೇ 2023, 4:28 IST
Last Updated 9 ಮೇ 2023, 4:28 IST
ಚಿನ್ಮಯಿ ಚಿತ್ರಿಕಿ
ಚಿನ್ಮಯಿ ಚಿತ್ರಿಕಿ   

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಲಹಂಕದ ಮಾತೃ ಎಜುಕೇಷನಲ್‌ ಟ್ರಸ್ಟ್‌ ಶಾಲೆಯ ದೃಷ್ಟಿದೋಷವುಳ್ಳ ವಿದ್ಯಾರ್ಥಿನಿ ಚಿನ್ಮಯಿ ಚಿತ್ರಿಕಿ ಶೇ 98 ಅಂಕಗಳಿಸಿ ಹೆಮ್ಮೆಯ ಸಾಧನೆ ಮಾಡಿದ್ದಾರೆ.

ಚಿನ್ಮಯಿ 625ಕ್ಕೆ 612 ಅಂಕಗಳಿಸಿ ಗಮನ ಸೆಳೆದಿದ್ದಾರೆ. ಈಕೆ ಬಳ್ಳಾರಿ ಜಿಲ್ಲೆಯ ಸಂಡೂರಿನ ಚಿತ್ರಿಕಿ ವಿಶ್ವನಾಥ್‌ ಹಾಗೂ ಮಂಗಳಗೌರಿ ದಂಪತಿ ಪುತ್ರಿ.

‘ಹುಟ್ಟುತ್ತಲೇ ಚಿನ್ಮಯಿಗೆ ದೃಷ್ಟಿದೋಷದ ಸಮಸ್ಯೆ ಕಾಣಿಸಿತ್ತು. ಸಂಡೂರಿನಲ್ಲಿ ದೃಷ್ಟಿದೋಷವುಳ್ಳ ಮಕ್ಕಳ ಕಲಿಕೆಗೆ ಶಾಲೆಗಳು ಇರಲಿಲ್ಲ. ಮಗಳಿಗೆ ಶಿಕ್ಷಣ ಕೊಡಿಸಲು ಪೋಷಕರು ಬೆಂಗಳೂರಿಗೆ ಸ್ಥಳಾಂತರಗೊಂಡರು. ದೃಷ್ಟಿದೋಷದ ಸಮಸ್ಯೆ ನಡುವೆಯೂ ಉತ್ತಮ ಸಾಧನೆ ಮಾಡಿದ್ದಾರೆ’ ಎಂದು ಟ್ರಸ್ಟ್‌ನ ಸಲಹಾ ಸಮಿತಿ ಸದಸ್ಯ ಚಂದ್ರಶೇಖರ ಪುಟ್ಟಪ್ಪ ತಿಳಿಸಿದ್ದಾರೆ.

ADVERTISEMENT

‘ಮಗಳು ಚಿಕ್ಕವಳಿದ್ದಾಗಲೇ ಕಣ್ಣಿನ ಸಮಸ್ಯೆ ಇರುವುದು ತಿಳಿಯಿತು. ಹಲವು ಕಡೆ ತಪಾಸಣೆ ನಡೆಸಿದ್ದರೂ ಸಮಸ್ಯೆ ನಿವಾರಣೆಯಾಗಿಲ್ಲ. ಮನೆಯಲ್ಲಿ ಅವರ ತಾತ ಕಲಿಸುತ್ತಿದ್ದರು. ಬ್ರೈಲ್‌ ಲಿಪಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ. ಪ್ರಜ್ವಲ್‌ ಎಂಬ ವಿದ್ಯಾರ್ಥಿಯ ಸಹಾಯ ಪಡೆದು ಪುತ್ರಿ ಪರೀಕ್ಷೆ ಬರೆದಳು. ಶಾಲೆಯ ಮ್ಯಾನೇಜಿಂಗ್‌ ಟ್ರಸ್ಟಿ ಮುಕ್ತಾ ಅವರ ಪ್ರೋತ್ಸಾಹದಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗಿದೆ’ ಎಂದು ತಾಯಿ ಮಂಗಳಗೌರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.