ADVERTISEMENT

ಪರೀಕ್ಷಾ ಅಕ್ರಮ ನಡೆಸಿದರೆ ಜೈಲಿಗೆ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 20:13 IST
Last Updated 22 ಮಾರ್ಚ್ 2019, 20:13 IST
 ವಿ.ಸುಮಂಗಳಾ 
 ವಿ.ಸುಮಂಗಳಾ    

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪ್ರಶ್ನೆ ಪತ್ರಿಕೆಗಳ ಫೋಟೊ ತೆಗೆದು ವಾಟ್ಸ್‌ಆ್ಯಪ್‌ ಮೂಲಕ ಹರಿಬಿಡುವುದು, ಪರೀಕ್ಷಾ ಕೇಂದ್ರಗಳಲ್ಲಿ ಚೀಟಿ ಸರಬರಾಜು ಮಾಡುವುದು ಮತ್ತು ಉತ್ತರ ಹೇಳಿಕೊಡುವುದು ಮಾಡಿದರೆ 3 ರಿಂದ 5 ವರ್ಷ ಜೈಲು ಮತ್ತು ₹ 5 ಲಕ್ಷ ದಂಡ ವಿಧಿಸಲಾಗುವುದು ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಪರೀಕ್ಷಾ ಅವ್ಯವಹಾರದ ಅಪರಾಧ ಕೃತ್ಯಕ್ಕೆ ಕರ್ನಾಟಕ ಶಿಕ್ಷಣ ಕಾಯ್ದೆ ಕಂಡಿಕೆ 115ಎ ದಂಡ ಪರೀಕ್ಷಾ ನಿಯಮ ಉಲ್ಲಂಘನೆ ಸೆಕ್ಷನ್‌ 24 ಎ ಪ್ರಕಾರ ಜೈಲಿಗೆ ಹಾಕಲು ಅವಕಾಶ ಇದೆ ಎಂದು ಅವರು ತಿಳಿಸಿದ್ದಾರೆ.

ಪರೀಕ್ಷೆಯನ್ನು ಶಾಂತಿ ಸುವ್ಯವಸ್ಥೆ ಮತ್ತು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಶನಿವಾರ(ಮಾ.23) ಟೆಲಿಕಾನ್ಫೆರೆನ್ಸ್‌ ಮೂಲಕ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಉಪ ಮುಖ್ಯಅಧೀಕ್ಷಕರು, ಕಸ್ಟೋಡಿಯನ್‌ರವರ ತುರ್ತು ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ರಾಯಚೂರು ಜಿಲ್ಲೆಯ ಲಿಂಗಸಗೂರು ಕನ್ನಡ ವಿಷಯದ ಪ್ರಶ್ನೆ ಪತ್ರಿಕೆ ಒಂದು ಪುಟ ವಾಟ್ಸ್‌ಆ್ಯಪ್‌ ಮೂಲಕ ಹರಿದಾಡಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಶಿರಾ ತಾಲ್ಲೂಕಿನ ಬಂದಕುಂಟೆಯ ಮಣ್ಣಮ್ಮ ಪ್ರೌಢಶಾಲೆ ಪ್ರಭಾರಿ ಮುಖ್ಯ ಶಿಕ್ಷಕ ಎಸ್‌.ಕಾಂತರಾಜು ಪ್ರಶ್ನೆ ಪತ್ರಿಕೆ ಫೋಟೊ ತೆಗೆದು ವಾಟ್ಸ್‌ಆ್ಯಪ್‌ ಮೂಲಕ ಹರಿಬಿಟ್ಟಿರುವುದ ಸಾಬೀತಾಗಿರುವುದರಿಂದ, ಅವರನ್ನು ಅಮಾನತ್ತುಗೊಳಿಸಿ, ಎಫ್‌ಐಆರ್‌ ದಾಖಲಿಸಲಾಗಿದೆ. ಶಿಕ್ಷಕರನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ ಎಂದು ತಿಳಿಸಿದ್ದಾರೆ.

ಪರೀಕ್ಷಾ ಅಕ್ರಮಗಳಲ್ಲಿ ಪಾಲ್ಗೊಳ್ಳುವವರು, ಸಹಕರಿಸುವವರು ಮತ್ತು ಪ್ರಚೋದಿಸುವವರು ವಿದ್ಯಾರ್ಥಿಗಳಾಗಲಿ, ಶಿಕ್ಷಕರಾಗಲಿ, ಬಾಹ್ಯ ವ್ಯಕ್ತಿಗಳಾಗಲಿ ಅಂತಹವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಸುಮಂಗಲಾ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.