ADVERTISEMENT

ಎಸ್‌.ಟಿಗೆ ಸೇರಿಸಲು ಕುರುಬರ ಆಗ್ರಹ

ಇದೇ 20ರಂದು ಸಮುದಾಯದ ನಾಯಕರ ಸಭೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 21:09 IST
Last Updated 17 ಮಾರ್ಚ್ 2020, 21:09 IST

ಬೆಂಗಳೂರು: ರಾಜ್ಯದಲ್ಲಿ ಕುರುಬ ಸಮುದಾಯವನ್ನು‍ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸುವ ಸಂಬಂಧ ಭವಿಷ್ಯದಲ್ಲಿ ತೆಗೆದುಕೊಳ್ಳಬೇಕಾದ ನಿಲುವುಗಳ ಬಗ್ಗೆ ಚರ್ಚಿಸಲು ಇದೇ 20ಕ್ಕೆ ನಗರದಲ್ಲಿ ಸಭೆ ಕರೆಯಲಾಗಿದೆ.

‘ಎಲ್ಲ ಪಕ್ಷಗಳಲ್ಲಿರುವ ಕುರುಬ ಸಮಾಜದ ನಾಯಕರು, ಹೋರಾಟಗಾರರು ಹಾಗೂ ಎಸ್‌ಟಿ ಮೀಸಲಾತಿ ಅಡಿ ಸರ್ಕಾರಿ ಹುದ್ದೆ ಪಡೆದ ಕುರುಬ ಸಮಾಜದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ನಿರೀಕ್ಷೆ ಇದೆ. ಎಸ್‌ಟಿ ಮೀಸಲಾತಿಗೆ ಆಗ್ರಹಿಸಿ ಸಮಾವೇಶ ಏರ್ಪಡಿಸಬೇಕೆ ಅಥವಾ ದೆಹಲಿಗೆ ನಿಯೋಗ ಕೊಂಡೊಯ್ಯಬೇಕೇ ಎಂಬ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗುವುದು’ ಎಂದು ಕುರುಬ ಸಮಾಜದ ಮುಖಂಡ ಕೆ.ವಿರೂಪಾಕ್ಷಪ್ಪ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಎಲ್ಲರೂ ಸಂಘಟಿತರಾಗಿ ಹೋರಾಡಿ, ಸರ್ಕಾರದ ಮೇಲೆ ಒತ್ತಡ ಹೇರದ ಕಾರಣ, ಸಮುದಾಯವು ಎಸ್‌ಟಿಗೆ ಸೇರಲು ಸಾಧ್ಯವಾಗಿಲ್ಲ. ಕೊಡಗಿನಲ್ಲಿ ಜೇನು ಕುರುಬರಿಗೆ ಎಸ್‌ಟಿ ಮೀಸಲಾತಿ ಪ್ರಮಾಣ ಪತ್ರ ನೀಡಲಾಗುತ್ತದೆ. ಅದೇ, ಜೇನುಕುರುಬ ಅಭ್ಯರ್ಥಿಗೆ ಬೆಂಗಳೂರು ಅಥವಾ ರಾಜ್ಯದ ಯಾವುದಾದರೂ ಜಿಲ್ಲೆಯಲ್ಲಿ ಈ ಪ್ರಮಾಣ ಪತ್ರ ನೀಡುವುದಿಲ್ಲ’ ಎಂದರು.

ADVERTISEMENT

ಸಮುದಾಯದ ಮತ್ತೊಬ್ಬ ಮುಖಂಡ ಕೆ. ಮುಕುಡಪ್ಪ, ‘ಸ್ವಾತಂತ್ರ್ಯಕ್ಕೂ ಮುನ್ನ ಕುರುಬರನ್ನು ವಿವಿಧ ಹೆಸರುಗಳಿಂದ ಕರೆಯುತ್ತಿದ್ದರು. ಮದ್ರಾಸ್‌ ಪ್ರಾಂತ್ಯ, ಮಂಗಳೂರು, ಬೆಂಗಳೂರಿನಲ್ಲಿ ಕುರಮನ್ಸ್‌ರನ್ನು ಎಸ್‌ಟಿಗೆ, ಕಾಟ್ಟುನಾಯಕನ್‌ ಎಸ್‌ಸಿಗೆ, ಮುಂಬೈ ಕರ್ನಾಟಕದಲ್ಲಿ ಗೊಂಡ ಸಮುದಾಯವನ್ನು ಎಸ್‌ಟಿಗೆ ಸೇರಿಸಲಾಗಿತ್ತು’ ಎಂದು ತಿಳಿಸಿದರು.

‘1977ರ ಜುಲೈ 27ರಂದು ಸರ್ಕಾರ ಆದೇಶ ಹೊರಡಿಸಿದಾಗ, ‘ಕುರುಬ’ ಪದವನ್ನು ಬಿಟ್ಟು ಉಳಿದೆಲ್ಲ ಕುರುಬರ ಪಂಗಡಗಳನ್ನು ಇಡೀ ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಕುರುಬರು ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಪಡೆಯಲು ಸಾಧ್ಯವಾಗಿಲ್ಲ. ಸಮುದಾಯ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು’ ಎಂದರು.

ಕುರುಬ ಸಮಾಜದ ಮುಖಂಡರಾದ ಪುಟ್ಟಸ್ವಾಮಿ, ಟಿ.ಬಿ. ಬಳಗಾವಿ, ನಾಗೇಶ್, ಮಲ್ಲೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.