ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಸಂಬಂಧ ನ್ಯಾಯಾಂಗ ತನಿಖೆ ನಡೆಯುತ್ತಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಆರ್‌ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ ಸಾವನ್ನಪ್ಪಿರುವುದು ದೊಡ್ಡ ದುರಂತ. ಈ ಘಟನೆ ನಡೆಯಬಾರದಿತ್ತು. ಈ ಸಂಬಂಧ ಸರ್ಕಾರ ಈಗಾಗಲೇ ಕ್ರಮವಹಿಸಿದ್ದು, ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆಗೆ ವಹಿಸಲಾಗಿದೆ. ಜೊತೆಗೆ ಲೋಪಕ್ಕೆ ಕಾರಣವಾದ ಉನ್ನತ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಬಿಜೆಪಿ ಯಾವ ಉದ್ದೇಶದಿಂದ ಪ್ರತಿಭಟನೆ ನಡೆಸುತ್ತಿದೆ’ ಎಂದು ಪ್ರಶ್ನಿಸಿದರು.
ಕೋರ್ಟ್ ಆದೇಶವಿದ್ದರೂ ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟವರ ಬಗ್ಗೆ ಈವರೆಗೂ ಸ್ಪಷ್ಟ ಮಾಹಿತಿ ನೀಡಿಲ್ಲ. ಪರಿಹಾರದ ವಿಚಾರದಲ್ಲಿಯೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ಕೋರ್ಟ್ ಛೀಮಾರಿ ಹಾಕಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.