ADVERTISEMENT

ಚಿನ್ನಸ್ವಾಮಿ ಬಳಿ ಕಾಲ್ತುಳಿತ ಪ್ರಕರಣ: ಪೊಲೀಸ್ ಅಧಿಕಾರಿಗಳು, ವೈದ್ಯರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 16:06 IST
Last Updated 23 ಜೂನ್ 2025, 16:06 IST
<div class="paragraphs"><p>ಎಂ. ಚಿನ್ನಸ್ವಾಮಿ ಕ್ರೀಡಾಂಗಣ </p></div>

ಎಂ. ಚಿನ್ನಸ್ವಾಮಿ ಕ್ರೀಡಾಂಗಣ

   

-ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ (ಆರ್‌ಸಿಬಿ) ತಂಡದ ವಿಜಯೋತ್ಸವದ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ನಡೆಯುತ್ತಿರುವ ಮ್ಯಾಜಿಸ್ಟೀರಿಯಲ್‌ ತನಿಖೆ ಚುರುಕುಗೊಂಡಿದ್ದು, ಪೊಲೀಸ್ ಅಧಿಕಾರಿಗಳು ಹಾಗೂ ವೈದ್ಯರನ್ನು ಸೋಮವಾರ ವಿಚಾರಣೆ ನಡೆಸಲಾಯಿತು.

ADVERTISEMENT

ಕೇಂದ್ರ ವಲಯದ ಡಿಸಿಪಿಯಾಗಿದ್ದ ಶೇಖರ್‌ ಟೆಕ್ಕಣನವರ, ಕಬ್ಬನ್‌ ಪಾರ್ಕ್‌ ಠಾಣೆಯ ಇನ್‌ಸ್ಪೆಕ್ಟರ್‌ ಆಗಿದ್ದ ಗಿರೀಶ್, ಡಿಎನ್‌ಎ ಮ್ಯಾನೇಜ್‌ಮೆಂಟ್ (ಇ-ವೆಂಟ್‌) ಸಿಬ್ಬಂದಿ ಸುನಿಲ್ ಮ್ಯಾಥ್ಯು ಹಾಗೂ ಕಾಲ್ತುಳಿತದಿಂದ ಮೃತಪಟ್ಟ 11 ಮಂದಿಯ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದರು. ತನಿಖಾ ತಂಡವು ಹೇಳಿಕೆಯನ್ನು ವಿಡಿಯೊ ರೆಕಾರ್ಡ್ ಮಾಡಿಕೊಂಡಿತು ಎಂದು ಗೊತ್ತಾಗಿದೆ.

ಕಂದಾಯ ಭವನದಲ್ಲಿ ವಿಚಾರಣೆಗೆ ಪ್ರತ್ಯೇಕ ಕಚೇರಿ ತೆರೆಯಲಾಗಿದ್ದು, ಅಲ್ಲಿಗೆ ಬಂದ ಅಧಿಕಾರಿಗಳಿಗೆ ತನಿಖಾಧಿಕಾರಿ ಕೆಲವು ಪ್ರಶ್ನೆಗಳನ್ನು ಕೇಳಿದರು.

ವಿಜಯೋತ್ಸವಕ್ಕೆ ಪೊಲೀಸ್‌ ಇಲಾಖೆ ಅನುಮತಿ ನೀಡಿತ್ತೇ? ಅನುಮತಿ ನೀಡುವಂತೆ ಯಾರಾದರೂ ಒತ್ತಡ ಹೇರಿದ್ದರೆ? ಭದ್ರತೆಗೆ ಎಷ್ಟು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು ಎಂಬ ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲು ಮಾಡಿಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.

ಕಾಲ್ತುಳಿತ ದುರಂತದಲ್ಲಿ 11 ಮಂದಿ ಉಸಿರುಗಟ್ಟಿಯೇ ಸಾವಿಗೀಡಾಗಿದ್ದರು. ಕೆಲವರ ದೇಹದಲ್ಲಿ ಮೂಳೆಗಳು ಮುರಿದ್ದವು ಎಂಬುದಾಗಿ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ವರದಿ ಸಲ್ಲಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರೂ ಸೋಮವಾರ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು ಎಂದು ಗೊತ್ತಾಗಿದೆ.

ಅಗತ್ಯಬಿದ್ದರೆ ಮತ್ತೊಮ್ಮೆ ವಿಚಾರಣೆಗೆ ಕರೆಯಲಾಗುವುದು ಎಂದು ತನಿಖಾ ತಂಡವು ಎಲ್ಲರಿಗೂ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ನಗರ ಕಮಿಷನರ್‌ ಆಗಿದ್ದ ಬಿ.ದಯಾನಂದ ಸೇರಿದಂತೆ ಕೆಲವರು ವಿಚಾರಣೆಗೆ ಗೈರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.