ADVERTISEMENT

ಸ್ಥಾಯಿ ಸಮಿತಿ ಚುನಾವಣೆ ಇಂದು

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 5:37 IST
Last Updated 18 ಜನವರಿ 2020, 5:37 IST
   

ಬೆಂಗಳೂರು: ಮೂರು ಬಾರಿ ಮುಂದೂಡಲ್ಪಟ್ಟಿರುವ ಬಿಬಿಎಂಪಿ 12 ಸ್ಥಾಯಿ ಸಮಿತಿಗಳ ಚುನಾವಣೆ ಶನಿವಾರ ನಿಗದಿಯಾಗಿದ್ದು, ಮೂರು ಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ.

ಪಾಲಿಕೆ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಬೆಳಿಗ್ಗೆ 8 ರಿಂದ 9.30ರವರೆಗೆ ನಾಮಪತ್ರ ಸ್ವೀಕರಿಸಲಾಗುತ್ತದೆ.11.30ಕ್ಕೆ ಚುನಾವಣೆ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತ ಎನ್.ವಿ. ಪ್ರಸಾದ್ ಅವರು ತಿಳಿಸಿದ್ದಾರೆ.

ಆಡಳಿತ ಪಕ್ಷ ಬಿಜೆಪಿ ಶುಕ್ರವಾರ ತಡರಾತ್ರಿ ತನಕವೂ ಸಭೆ ನಡೆಸಿದ್ದು, ಸ್ಥಾಯಿ ಸಮಿತಿಗೆ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿತು. ಕಾಂಗ್ರೆಸ್‌ ಕೂಡ ಶುಕ್ರವಾರ ಸಭೆ ನಡೆಸಿದ್ದು, ಎಲ್ಲಾ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ADVERTISEMENT

‘ಈ ಬಾರಿ ಚುನಾವಣೆ ಮುಂದೂಡಿಕೆ ಪ್ರಶ್ನೆಯೇ ಇಲ್ಲ. ಯಾವುದೇ ಪಕ್ಷದ ಸದಸ್ಯರು ಭಾಗವಹಿಸಲಿ ಬಿಡಲಿ ಕಾಂಗ್ರೆಸ್‌ ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದೇವೆ’ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ತಿಳಿಸಿದರು.

ನಿಷೇಧಾಜ್ಞೆ: ಬಿಬಿಎಂಪಿ ಕಚೇರಿಯ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

‘ಮೆರವಣಿಗೆ ಅಥವಾ ಸಭೆ ನಡೆಸುವಂತಿಲ್ಲ ಮತ್ತು ಘೋಷಣೆ ಕೂಗುವಂತಿಲ್ಲ. ಮಾರಕಾಸ್ತ್ರ, ಸ್ಫೋಟಕ ವಸ್ತುಗಳ ಶೇಖರಣೆ, ಸಾಗಣೆ ನಿಷೇಧಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.