ADVERTISEMENT

ನಕ್ಷತ್ರ ಆಮೆ ಮಾರಾಟ ಜಾಲ ಪತ್ತೆ: 1,132 ಆಮೆಗಳ ರಕ್ಷಣೆ

* ಆರ್‌.ಎಂ.ಸಿ ಯಾರ್ಡ್ ಪೊಲೀಸರ ಕಾರ್ಯಾಚರಣೆ * ಹಕ್ಕಿ– ಪಿಕ್ಕಿ ಜನಾಂಗದ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 18:37 IST
Last Updated 10 ಸೆಪ್ಟೆಂಬರ್ 2022, 18:37 IST
ಆರ್‌.ಎಂ.ಸಿ ಯಾರ್ಡ್ ಠಾಣೆ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ನಕ್ಷತ್ರ ಆಮೆ
ಆರ್‌.ಎಂ.ಸಿ ಯಾರ್ಡ್ ಠಾಣೆ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ನಕ್ಷತ್ರ ಆಮೆ   

ಬೆಂಗಳೂರು: ಅರಣ್ಯಗಳಲ್ಲಿ ದೊರೆಯುವ ನಕ್ಷತ್ರ ಆಮೆಗಳನ್ನು ಕದ್ದು ತಂದು ಮಹಾನಗರಗಳಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಆರ್‌.ಎಂ.ಸಿ ಯಾರ್ಡ್ ಠಾಣೆ ಪೊಲೀಸರು ಭೇದಿಸಿದ್ದು, 1,132 ಆಮೆಗಳನ್ನು ರಕ್ಷಿಸಿದ್ದಾರೆ.

‘ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಬಸ್ ತಂಗುದಾಣ ಬಳಿ ಇತ್ತೀಚೆಗೆ ಸುತ್ತಾಡುತ್ತಿದ್ದ ಆರೋಪಿಗಳು ಬ್ಯಾಗ್‌ಗಳಲ್ಲಿ ನಕ್ಷತ್ರ ಆಮೆಗಳನ್ನು ಇರಿಸಿಕೊಂಡು ಸಾರ್ವಜನಿಕರಿಗೆ ಮಾರಲು ಯತ್ನಿಸುತ್ತಿದ್ದರು. ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು. ಇವರ ವಿಚಾರಣೆಯಿಂದ ನಕ್ಷತ್ರ ಆಮೆಗಳ ಮಾರಾಟ ಜಾಲ ಪತ್ತೆಯಾಯಿತು’ ಎಂದು ಪೊಲೀಸರು ಹೇಳಿದರು.

‘ಜಾಲದ ಆರೋಪಿಗಳಾದ ಕಲ್ಯಾಣ್, ಸಿಂಹಾದ್ರಿ, ಇಶಾಕ್ ಹಾಗೂ ರಾಜಪುತ್ರ ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ ಜಪ್ತಿ ಮಾಡಿರುವ 1,132 ಆಮೆಗಳನ್ನು ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನದಲ್ಲಿರುವ ಸಂರಕ್ಷಣಾ ಕೇಂದ್ರದ ಸುಪರ್ದಿಗೆ ನೀಡಲಾಗಿದೆ. ಕೃತ್ಯದ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

ಅದೃಷ್ಟಕ್ಕೆಂದು ಆಮೆ ಖರೀದಿ: ‘ನೀರಿನ ಅಗತ್ಯವಿಲ್ಲದೆ ಅರಣ್ಯದಲ್ಲಿ ಜೀವಿಸುವ ನಕ್ಷತ್ರ ಆಮೆಗಳಿಗೆ ಬೇಡಿಕೆ ಹೆಚ್ಚಿದೆ. ಇಂಥ ಆಮೆಗಳನ್ನು ಖರೀದಿಸುವ ಹಲವರು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳುತ್ತಾರೆ. ಕೆಲವರು ನಿತ್ಯವೂ ಪೂಜೆ ಮಾಡುತ್ತಾರೆ. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆಂಬ ನಂಬಿಕೆ ಹಲವರಲ್ಲಿದೆ’ ಎಂದು ಪೊಲೀಸರು ಹೇಳಿದರು.

‘ಹಕ್ಕಿ–ಪಿಕ್ಕಿ ಜನಾಂಗದ ಆರೋಪಿಗಳು ನಕ್ಷತ್ರ ಆಮೆಗಳಿಗೆ ಬೇಡಿಕೆ ಇರುವುದನ್ನು ತಿಳಿದುಕೊಂಡಿದ್ದರು. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅದೋನಿ ಅರಣ್ಯ ಪ್ರದೇಶದಲ್ಲಿ ಓಡಾಡಿ, ನಕ್ಷತ್ರ ಆಮೆಗಳನ್ನು ಕದಿಯುತ್ತಿದ್ದರು. ಅವುಗಳನ್ನೇ ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ಇತರೆ ನಗರಗಳಿಗೆ ತೆಗೆದುಕೊಂಡು ಹೋಗಿ ಮಾರುತ್ತಿದ್ದರು’ ಎಂದೂ ತಿಳಿಸಿದರು.

ಆರೋಪಿ ಮನೆ ಮೇಲೆ ದಾಳಿ: 'ಗೊರಗುಂಟೆಪಾಳ್ಯ ಬಸ್ ತಂಗುದಾಣ ಬಳಿ ಬಂಧಿಸಲಾಗಿದ್ದ ಮೂವರು ಆರೋಪಿಗಳ ಪೈಕಿ 960 ಆಮೆಗಳು ಸಿಕ್ಕಿದ್ದವು. ತನಿಖೆ ಮುಂದುವರಿಸಿ ನಾಲ್ಕನೇ ಆರೋಪಿ ಬಂಧಿಸಲಾಯಿತು. ಈತನ ಮನೆ ಮೇಲೆ ದಾಳಿ ನಡೆಸಿದಾಗ, 172 ಆಮೆಗಳು ಪತ್ತೆಯಾದವು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.