ADVERTISEMENT

‘ಕಡ್ಡಾಯವಾಗಿ ನಾಡಗೀತೆ ಗಾಯನ ಅನುಷ್ಠಾನಗೊಳಿಸಿ’

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 14:09 IST
Last Updated 9 ಅಕ್ಟೋಬರ್ 2025, 14:09 IST
ಪುರುಷೋತ್ತಮ ಬಿಳಿಮಲೆ
ಪುರುಷೋತ್ತಮ ಬಿಳಿಮಲೆ   

ಬೆಂಗಳೂರು: ‘ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿರುವ ಆದೇಶವನ್ನು ಅನುಷ್ಠಾನ ಮಾಡಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. 

ಈ ಬಗ್ಗೆ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ‘ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ‘ಜಯ ಭಾರತ ಜನನಿಯ ತನುಜಾತೆ’ ಶೀರ್ಷಿಕೆಯ ನಾಡಗೀತೆಯನ್ನು, ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಡುವುದನ್ನು ಕಡ್ಡಾಯಗೊಳಿಸಿ 20 ವರ್ಷಗಳೇ ಸಂದಿವೆ. ಈ ಆದೇಶ ಸಮರ್ಪಕ ಅನುಷ್ಠಾನ ಆಗದಿರುವುದು ವಿಷಾದನೀಯ’ ಎಂದಿದ್ದಾರೆ.

‘ರಾಷ್ಟ್ರೀಯ ಏಕತೆಯನ್ನು ಅತ್ಯಂತ ಸುಂದರವಾಗಿ ಅಭಿವ್ಯಕ್ತಿಸಿರುವ ಈ ನಾಡಗೀತೆ, ಇಂದಿಗೂ ನಮ್ಮ ಉಸಿರಾಗದಿರುವುದು ನಮ್ಮ ವ್ಯವಸ್ಥೆಯ ಸೋಲು ಎನ್ನದೆ ವಿಧಿಯಿಲ್ಲ. ವಿಶೇಷವಾಗಿ ಖಾಸಗಿ ಶಾಲೆಗಳು ನಾಡಗೀತೆಗೆ ಯಾವುದೇ ಮಾನ್ಯತೆಯನ್ನು ನೀಡದೆ ಅನಿಯಂತ್ರಿತ ಆಡಳಿತವನ್ನು ನಡೆಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಠಿಣ ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ, ನಾಡಗೀತೆಯನ್ನು ಕಡ್ಡಾಯವಾಗಿ ಹಾಡುವ ಸ್ವನಿಯಂತ್ರಿತ ವ್ಯವಸ್ಥೆಯನ್ನು ರೂಪಿಸಲು ಕ್ರಮವಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.