ADVERTISEMENT

ಇ-ಕೆವೈಸಿ ಪ್ರಕ್ರಿಯೆ: ನಗರದಲ್ಲಿ ಪಡಿತರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 19:33 IST
Last Updated 10 ಜನವರಿ 2020, 19:33 IST
   

ಬೆಂಗಳೂರು: ಪಡಿತರ ಚೀಟಿಯ ಇ–ಕೆವೈಸಿ ಅನುಷ್ಠಾನದ ವೇಳೆ ನಗರದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ವ್ಯತ್ಯಯವಾಗಿರುವುದನ್ನುಕರ್ನಾಟಕ ರಾಜ್ಯ ಆಹಾರ ಆಯೋಗವು ಗುರುತಿಸಿದೆ.

ಇ-ಕೆವೈಸಿ ಪ್ರಕ್ರಿಯೆಯನ್ನು ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲೇ ಜ.10ರೊಳಗೆ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಆಯೋಗದ ಸದಸ್ಯರು ನಗರ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಮೂರು ದಿನಗಳ ಕಾಲ ಅಧ್ಯಯನ ನಡೆಸಿದ್ದಾರೆ.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವನಾಲ್ಕು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ಅಲ್ಲಿನ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಯೋಗದ ಅಧ್ಯಕ್ಷ ಎನ್.ಕೃಷ್ಣಮೂರ್ತಿ ಮಾತನಾಡಿ, ‘ಸರ್ವರ್‌ ಸಮಸ್ಯೆಯಿಂದ ಫಲಾನುಭವಿಗಳು ವಿವರ ಅಪ್‌ಲೋಡ್‌ ಮಾಡಲು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಸಮರ್ಪಕವಾಗಿ ಪಡಿತರ ವಿತರಣೆ ಆಗುತ್ತಿಲ್ಲ’ ಎಂದು ತಿಳಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆಯ ಜಂಟಿ ನಿರ್ದೇಶಕಿಗಿರಿಜಾದೇವಿ, ‘ನಗರದಲ್ಲಿ ಮೂರು ಸರ್ವರ್‌ಗಳು ಮಾತ್ರ ಇರುವುದರಿಂದ ಸಮಸ್ಯೆ ಉಂಟಾಗಿದೆ. ಇ–ಕೆವೈಸಿಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೆಚ್ಚುವರಿ ಸರ್ವರ್ ಅಳವಡಿಸಿ, ಜ.20 ರಿಂದ ಮತ್ತೆ ಪ್ರಕ್ರಿಯೆ ಆರಂಭಿಸಲಾಗುವುದು. ಪಡಿತರ ವಿತರಣೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಊಟದಲ್ಲಿ ವ್ಯತ್ಯಯ:‘ಆನೇಕಲ್‌ನಲ್ಲಿರುವ ಸರ್ಕಾರಿ ಹೊಸ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ ಅಲ್ಲಿ ಮಧ್ಯಾಹ್ನದ ಬಿಸಿಯೂಟ ಸಮರ್ಪಕವಾಗಿ ನಡೆಯದಿರುವುದು ಕಂಡು ಬಂದಿದೆ. ಒಂದು ತಿಂಗಳಿನಿಂದ ಅಲ್ಲಿ ಬೇಳೆಯನ್ನೇ ಖರೀದಿಸಿಲ್ಲ. ಮಕ್ಕಳಿಗೆ ಟೊಮೆಟೊ ರೈಸ್‌ ಬಾತ್ ನೀಡಲಾಗುತ್ತಿದೆ’ ಎಂದುಆಯೋಗದ ಸದಸ್ಯ ಮೊಹ್ಮದ್ ಅಲಿ ಬೇಸರ ವ್ಯಕ್ತಪಡಿಸಿದರು.

‘ಶಾಲೆಯ 163 ವಿದ್ಯಾರ್ಥಿಗಳಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳು ಮನೆಯಿಂದಲೇ ಊಟ ತರುತ್ತಿದ್ದಾರೆ. ಶಾಲೆಗೆ ವಿತರಿಸಲಾಗಿರುವ 150 ಪ್ಲೇಟ್‌ಗಳನ್ನು ಪ್ರಾಂಶುಪಾಲರು ಕಪಾಟಿನಲ್ಲಿ ಬೀಗ ಹಾಕಿ ಇಟ್ಟಿದ್ದಾರೆ’ ಎಂದರು.

‘ಸಿದ್ದನಹಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅಕ್ಷಯ ಪಾತ್ರೆ ಮಧ್ಯಾಹ್ನದ ಬಿಸಿ ಊಟ ವಿತರಿಸುತ್ತಿದೆ. ಆ ಊಟದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಇರದ ಕಾರಣ ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶ ಸಿಗದಂತಾಗಿದೆ. ಊಟ ಕೂಡ ರುಚಿಸುತ್ತಿಲ್ಲ ಎಂದು ಮಕ್ಕಳು ಹೇಳುತ್ತಾರೆ. ಪ್ರತಿ ಮಗುವಿಗೆ 150 ಗ್ರಾಂ. ಆಹಾರ ನೀಡಬೇಕೆಂಬ ನಿಯಮವಿದ್ದರೂ 100 ಗ್ರಾಂ. ನೀಡಲಾಗುತ್ತಿದೆ’ ಎಂದರು.

***

ಅಂಕಿ–ಅಂಶಗಳು

4.92 ಲಕ್ಷ :ಬಿಪಿಎಲ್ ಪಡಿತರ ಚೀಟಿ ಹೊಂದಿರುವವರ ಸಂಖ್ಯೆ

550 :ಬೆಂಗಳೂರು ನಗರ ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳು

14,568 :ಬೆಂಗಳೂರು ನಗರ ಜಿಲ್ಲೆಯಲ್ಲಿ ಸಾಧಾರಣ ಅಪೌಷ್ಟಿಕ ಮಕ್ಕಳು

164 :ತೀವ್ರ ಅಪೌಷ್ಟಿಕ ಸಮಸ್ಯೆ ಎದುರಿಸುತ್ತಿರುವ ಮಕ್ಕಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.