ADVERTISEMENT

ಬಿಜೆಪಿ ಆಡಳಿತ: ವಾರದಲ್ಲೇ ಬಡ್ತಿ ಅಕ್ರಮ!

ಲೋಕಾಯುಕ್ತ ಶಿಫಾರಸು ಕಡೆಗಣಿಸಿ ಕಳಂಕಿತ ಅಧಿಕಾರಿಗೆ ಮಣೆ

ಮಂಜುನಾಥ್ ಹೆಬ್ಬಾರ್‌
Published 1 ಆಗಸ್ಟ್ 2019, 19:30 IST
Last Updated 1 ಆಗಸ್ಟ್ 2019, 19:30 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ವಾರ ಕಳೆಯುವ ಮುನ್ನವೇ, ಲೋಕಾಯುಕ್ತರ ಶಿಫಾರಸು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶವನ್ನು ಧಿಕ್ಕರಿಸಿ ಕಳಂಕಿತ ಅಧಿಕಾರಿಯೊಬ್ಬರಿಗೆ ಬಡ್ತಿ ನೀಡಲಾಗಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯಲ್ಲಿದ್ದ ನಾಗರಾಜ್‌ ಡಿ.ನಾಯ್ಕ ಅವರನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಶೃಂಗೇರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಹುದ್ದೆಗೆ ಬುಧವಾರ ವರ್ಗಾವಣೆ ಮಾಡಲಾಗಿದೆ.

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದ ಬಳಿಕ ವಿವಿಧ ಇಲಾಖೆಗಳಲ್ಲಿ 2 ಸಾವಿರ ನೌಕರರನ್ನು ವರ್ಗಾವಣೆ ಮಾಡಲಾಗಿತ್ತು. ಲೋಕೋಪಯೋಗಿ ಇಲಾಖೆಯಲ್ಲಿ 800 ಎಂಜಿನಿಯರ್‌ಗಳನ್ನು ಒಂದೇ ದಿನ ವರ್ಗಾವಣೆ ಮಾಡಲಾಗಿತ್ತು. ಈ ವೇಳೆ, ನಾಗರಾಜ್‌ ಅವರೂ ಬಡ್ತಿ ಪಡೆದಿದ್ದರು. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಮೈತ್ರಿ ಸರ್ಕಾರ ಜುಲೈ ತಿಂಗಳಲ್ಲಿ ನಡೆಸಿದ್ದ ಎಲ್ಲ ವರ್ಗಾವಣೆಗಳನ್ನು ತಡೆ ಹಿಡಿಯುವಂತೆ ಯಡಿಯೂರಪ್ಪ ಅವರು ಅಧಿಕಾರ ಸ್ವೀಕಾರದ ದಿನವೇ ಆದೇಶಿಸಿದ್ದರು. ಆದರೆ, ಈ ಅಧಿಕಾರಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಲು ಅವರೇ ಅನುಮೋದನೆ ನೀಡಿದ್ದಾರೆ.

ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ 2006–07ನೇ ಸಾಲಿನಲ್ಲಿ ಟೆಂಡರ್‌ಗಳನ್ನು ಕರೆಯದೆ ತುಂಡು ಗುತ್ತಿಗೆ ನೀಡಲಾಗಿದೆ ಹಾಗೂ ಕೆಲಸ ನಡೆಸದಿದ್ದರೂ ಹಣ ಬಿಡುಗಡೆ ಮಾಡುವ ಮೂಲಕ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಸಿದ್ಧಾಪುರದ ಗುರುಮೂರ್ತಿ ಎನ್‌.ನಾಯಕ್‌ ಎಂಬುವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಕಿರಿಯ ಎಂಜಿನಿಯರ್‌ ಆಗಿದ್ದ ನಾಗರಾಜ್‌ ನಾಯ್ಕ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು.

ಈ ಅಕ್ರಮದ ಬಗ್ಗೆ ತನಿಖೆ ನಡೆಸಿದ ಲೋಕಾಯುಕ್ತರು ರಾಜ್ಯ ಸರ್ಕಾರಕ್ಕೆ 2017ರ ಅಕ್ಟೋಬರ್‌ನಲ್ಲಿ ವರದಿ ಸಲ್ಲಿಸಿದ್ದರು. ನಾಗರಾಜ್‌ ನಾಯ್ಕ ಸೇರಿದಂತೆ ಏಳು ಅಧಿಕಾರಿಗಳಿಗೆ ದಂಡನೆ ವಿಧಿಸಬೇಕು ಎಂದು ಶಿಫಾರಸು ಮಾಡಿದ್ದರು. ‘ಈ ಅಕ್ರಮದಿಂದ ಸರ್ಕಾರಕ್ಕೆ ₹7.44 ಲಕ್ಷ ನಷ್ಟವಾಗಿದ್ದನ್ನು ಅಥವಾ ಗುತ್ತಿಗೆದಾರರಿಂದ ಸರ್ಕಾರಕ್ಕೆ ಬರಬೇಕಾದ ಮೊತ್ತದಲ್ಲಿ ಶೇ 85ರಷ್ಟನ್ನು ಆಪಾದಿತ ಅಧಿಕಾರಿ ನಾಗರಾಜ್‌ ನಾಯ್ಕ್‌ ಅವರಿಂದ ವಸೂಲಿ ಮಾಡಬೇಕು. ಈ ನಡುವೆ ಸಹಾಯಕ ಎಂಜಿನಿಯರ್‌ ಹುದ್ದೆಯಲ್ಲಿದ್ದ ನಾಯ್ಕ್ ಅವರನ್ನು ಮತ್ತೆ ಕಿರಿಯ ಎಂಜಿನಿಯರ್‌ ಹುದ್ದೆಗೆ ಹಿಂಬಡ್ತಿಗೊಳಿಸಬೇಕು. ಅವರಿಗೆ 3 ವರ್ಷ ಯಾವುದೇ ಬಡ್ತಿ ನೀಡಬಾರದು’ ‌ಎಂದು ಸೂಚಿಸಿದ್ದರು.

ಲೋಕಾಯುಕ್ತರ ವಿಚಾರಣಾ ವರದಿ, ಶಿಫಾರಸು ಹಾಗೂ ದಾಖಲೆ, ಲೋಕೋಪಯೋಗಿ ಇಲಾಖೆ ಒದಗಿಸಿದ ಅಭಿಪ್ರಾಯ ಪರಿಶೀಲಿಸಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ನಾಯ್ಕ್ ಸೇರಿ ಐವರು ತಪ್ಪಿತಸ್ಥರು ಎಂದು 2018ರ ಆಗಸ್ಟ್‌ 21ರಂದು ಆದೇಶ ಹೊರಡಿಸಿತ್ತು.

ಏನಿದು ತುಂಡು ಗುತ್ತಿಗೆ?

*ಸಿದ್ಧಾಪುರದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ವಾಹನ ನಿಲ್ದಾಣ ನಿರ್ಮಾಣದ ಕಾಮಗಾರಿಯಲ್ಲಿ ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ ₹1.49 ಲಕ್ಷ ಪಾವತಿ.

*ಜೋಗದ ಪ್ರವಾಸಿ ಮಂದಿರವೊಂದರ ಕಾಂಪೌಂಡ್ ನಿರ್ಮಾಣ ಕಾಮಗಾರಿಯಲ್ಲಿ ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ ₹ 7.44 ಲಕ್ಷ ಪಾವತಿ. ಈ ಕಾಮಗಾರಿಗೆ ಗುಣಮಟ್ಟದ ಸಾಮಗ್ರಿ ಬಳಸದಿದ್ದುದು

*ಜೋಗ ಜಲ‍ಪಾತ ಕೂಡುರಸ್ತೆಯ ವಿಸ್ತರಣೆ ಹಾಗೂ ಡಾಂಬರೀಕರಣ ಕಾಮಗಾರಿಯಲ್ಲಿ ಗುತ್ತಿಗೆದಾರರ ಅನುಕೂಲ ಕಲ್ಪಿಸಲು ಐದು ಭಾಗಗಳನ್ನಾಗಿ ವಿಭಜಿಸಿ ಅನುಷ್ಠಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.