ADVERTISEMENT

ಸ್ಟೇಷನ್ ಮಾಸ್ಟರ್‌ಗಳ ಉಪವಾಸ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 18:46 IST
Last Updated 21 ಜನವರಿ 2021, 18:46 IST

ಬೆಂಗಳೂರು: ರಾತ್ರಿಪಾಳಿ ಭತ್ಯೆ ರದ್ದುಗೊಳಿಸಿರುವುದನ್ನು ಖಂಡಿಸಿ ರೈಲ್ವೆ ಇಲಾಖೆ ಸ್ಟೇಷನ್ ಮಾಸ್ಟರ್‌ಗಳು ನಗರದ ರೈಲ್ವೆ ವಿಭಾಗೀಯ ಕಚೇರಿ ಆವರಣದಲ್ಲಿ ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ಅಖಿಲ ಭಾರತ ಸ್ಟೇಷನ್ ಮಾಸ್ಟರ್‌ಗಳ ಸಂಘ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿತ್ತು. ‘ಸ್ಟೇಷನ್ ಮಾಸ್ಟರ್‌ಗಳು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಾರೆ. ಈಗ ಏಕಾಏಕಿ ರಾತ್ರಿಪಾಳಿಯಲ್ಲಿ ಕಾರ್ಯನಿರ್ವಹಿಸುವ ಸ್ಟೇಷನ್ ಮಾಸ್ಟರ್‌ಗಳಿಗೆ ನೀಡುವ ಭತ್ಯೆಗೆ ಕತ್ತರಿ ಹಾಕಲಾಗಿದೆ’ ಎಂದು ಉಪವಾಸನಿರತರು ಆರೋಪಿಸಿದರು.

‘ಕೇಂದ್ರೀಯ ವೇತನ ಆಯೋಗದ ಶಿಫಾರಸಿನ ಪ್ರಕಾರ ನೌಕರರ ಎಲ್ಲ ರೀತಿಯ ಭತ್ಯೆಗಳೂ ಪರಿಷ್ಕರಣೆಗೊಂಡಿವೆ. ಅದನ್ನು ರೈಲ್ವೆ ಇಲಾಖೆ ಕೂಡ ಅನುಷ್ಠಾನಗೊಳಿಸಿದೆ. ಈ ನಡುವೆ ₹43,600 ಅಥವಾ ಅದಕ್ಕೂ ಕಡಿಮೆ ಮೂಲವೇತನ ಪಡೆಯುವ ಸ್ಟೇಷನ್ ಮಾಸ್ಟರ್‌ಗಳಿಗೆ ಮಾತ್ರ ರಾತ್ರಿಪಾಳಿ ಭತ್ಯೆ ನೀಡಲು ರೈಲ್ವೆ ಮಂಡಳಿ ತೀರ್ಮಾನ ಕೈಗೊಂಡಿದೆ. ಇದರಿಂದ ಉಳಿದವರು ಭತ್ಯೆಯಿಂದ ವಂಚಿತರಾಗಲಿದ್ದಾರೆ. ಈ ನಿರ್ಧಾರವನ್ನು ಮಂಡಳಿ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಂಸದ ಪಿ.ಸಿ. ಮೋಹನ್ ಅವರಿಗೆ ಸಂಘ ಮನವಿ ಸಲ್ಲಿಸಿತು. ಸ್ಟೇಷನ್ ಮಾಸ್ಟರ್‌ಗಳ ಸಂಘದ ನೈರುತ್ಯ ವಲಯದ ಪ್ರಧಾನ ಕಾರ್ಯದರ್ಶಿ ಬಿ.ಪಿ. ಕುಮಾರಸ್ವಾಾಮಿ, ವಿಭಾಗೀಯ ಕಾರ್ಯದರ್ಶಿ ಅಜಯ್ ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.