ADVERTISEMENT

ಪಾರ್ಶ್ವವಾಯುಗೆ ತುರ್ತು ಚಿಕಿತ್ಸೆ: ಆರೋಗ್ಯ ಇಲಾಖೆ ಯೋಜನೆ

ಅಂಗವಿಕಲತೆ, ಅಕಾಲಿಕ ಸಾವು ತಡೆಗೆ ಆರೋಗ್ಯ ಇಲಾಖೆ ಯೋಜನೆ

ವರುಣ ಹೆಗಡೆ
Published 5 ಡಿಸೆಂಬರ್ 2022, 21:35 IST
Last Updated 5 ಡಿಸೆಂಬರ್ 2022, 21:35 IST
   

ಬೆಂಗಳೂರು: ಪಾರ್ಶ್ವವಾಯುವಿನಿಂದ ಉಂಟಾಗುತ್ತಿರುವ ಅಂಗವಿಕಲತೆ ಹಾಗೂ ಅಕಾಲಿಕ ಸಾವು ತಡೆಯಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದ್ದು, ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಸಹಯೋಗದಲ್ಲಿ ತುರ್ತು ಚಿಕಿತ್ಸೆ ಒದಗಿಸಲಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ ದಡಿ (ಎನ್‌ಎಚ್‌ಎಂ) ‘ಸ್ಟೆಮಿ’ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಬೆಂಗಳೂರಿನ ನಿಮ್ಹಾನ್ಸ್ ಹಾಗೂ ಧಾರವಾಡದ ಡಿಮಾನ್ಸ್‌ ನೋಡಲ್ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿದ್ದು, ಜಿಲ್ಲಾ ಸೇರಿ ವಿವಿಧ ಆಸ್ಪತ್ರೆಗಳ ಜತೆಗೆ ಸಂಪರ್ಕ ಸಾಧಿಸಲಿವೆ. ಯೋಜನೆಯಡಿ ತಜ್ಞ ಮನೋವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಇದರಿಂದಾಗಿ ರಾಜ್ಯದ ಯಾವುದೇ ಮೂಲೆಯಲ್ಲಿ ವ್ಯಕ್ತಿ ಪಾರ್ಶ್ವ
ವಾಯುವಿಗೆ ಒಳಗಾದರೂ ಸ್ಥಳೀಯ ಆಸ್ಪತ್ರೆಗಳಲ್ಲಿಯೇ ತುರ್ತು ಚಿಕಿತ್ಸೆ ದೊರೆಯಲಿದೆ.

ಈ ಯೋಜನೆಗೆ ಕೇಂದ್ರ ಸರ್ಕಾರವೇ ಅನುದಾನ ಒದಗಿಸಲಿದ್ದು, ಈಗಾಗಲೇ ತಮಿಳುನಾಡಿನಲ್ಲಿ
ಪ್ರಾರಂಭಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಯೋಜನೆ ಪ್ರಾರಂಭಿಸಲು ಕಾರ್ಯಯೋಜನೆ ರೂಪಿಸಲಾಗಿದೆ. ನಿಮ್ಹಾನ್ಸ್ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರತಿವರ್ಷ 70 ಸಾವಿರದಿಂದ 80 ಸಾವಿರ ಜನರು ಪಾರ್ಶ್ವವಾಯು ಪೀಡಿತರಾಗುತ್ತಿದ್ದಾರೆ. ರಾಜ್ಯದಲ್ಲಿ ಸದ್ಯ 6 ಲಕ್ಷ ಮಂದಿ ಪಾರ್ಶ್ವವಾಯು ಪೀಡಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಾರ್ಷಿಕ ಒಂದು ಲಕ್ಷ ಪಾರ್ಶ್ವವಾಯು ರೋಗಿಗಳ ಪೈಕಿ 73 ಜನರು ಮರಣ ಹೊಂದುತ್ತಿದ್ದಾರೆ.

ADVERTISEMENT

ತುರ್ತು ಚಿಕಿತ್ಸೆ:ನಿಮ್ಹಾನ್ಸ್‌ನಲ್ಲಿ ತುರ್ತು ಚಿಕಿತ್ಸೆಗೆ ದಾಖಲಾಗುವ ರೋಗಿ ಗಳಲ್ಲಿ ಶೇ 25ರಷ್ಟು ರೋಗಿಗಳು ಪಾರ್ಶ್ವವಾಯು ಪೀಡಿತರಾಗಿದ್ದಾರೆ. ತಿಂಗಳಿಗೆ 200ರಿಂದ 250 ರೋಗಿಗಳು ಈ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಸಂಸ್ಥೆಗೆ ಬರುತ್ತಿದ್ದಾರೆ.

‘ಪಾರ್ಶ್ವವಾಯುವಿನಿಂದ ಅಂಗಾಂಗ ವೈಫಲ್ಯ ಹಾಗೂ ಮರಣ ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಾರ್ಶ್ವವಾಯು ಆದಾಗ ಸಮಯಪ್ರಜ್ಞೆ ಬಹಳ ಮುಖ್ಯ. ಆರೈಕೆ ಹಾಗೂ ಚಿಕಿತ್ಸೆ ಸರಿಯಾದ ಕ್ರಮದಲ್ಲಿ ಮತ್ತು ಸರಿಯಾದ ಸಮಯಕ್ಕೆ ಸಿಕ್ಕರೆ ವ್ಯಕ್ತಿ ಬೇಗ ಗುಣಮುಖವಾಗಲು ಸಾಧ್ಯ. ಆದ್ದರಿಂದ ಸ್ಟೆಮಿ ಯೋಜನೆಯನ್ನು ಪರಿಚಯಿಸಲಾಗುತ್ತಿದೆ’ ಎಂದು
ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದ ಉಪ ನಿರ್ದೇಶಕ ಡಾ.ಜಿ. ಶ್ರೀನಿವಾಸ್ ತಿಳಿಸಿದರು.

ಹೃದಯ ಸಮಸ್ಯೆಗೆ ಶೀಘ್ರ ಚಿಕಿತ್ಸೆ

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ಹೃದಯ ಸಮಸ್ಯೆಗಳಿಗೆ ತುರ್ತು ಚಿಕಿತ್ಸೆ ಒದಗಿಸಲು ‘ಸ್ಟೆಮಿ’ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ಘಟಕವನ್ನು ಕಾರ್ಯಾಚರಣೆಯ ಕೇಂದ್ರಗಳನ್ನಾಗಿ ಬಳಸಿಕೊಂಡು, ಸೇವೆ ನೀಡಲಾಗುತ್ತದೆ. ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಹೃದ್ರೋಗ ತಜ್ಞರ ನೆರವು ಪಡೆದು
ಕೊಳ್ಳಲಾಗುತ್ತದೆ. ಕಳೆದ ವರ್ಷವೇ ಅನುಷ್ಠಾನಗೊಳ್ಳಬೇಕಾದ ಈ ಯೋಜನೆ, ಕೋವಿಡ್‌ನಿಂದಾಗಿ ಹಿನ್ನಡೆ ಅನುಭವಿಸಿತ್ತು. ಈಗ ಇಲಾಖೆ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.