ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ 2025ದಲ್ಲಿ ಪ್ರದರ್ಶನ ಮಳಿಗೆಗಳಿಗೆ ಶುಕ್ರವಾರ ನಿರ್ಮಲಾನಂದನಾಥ ಸ್ವಾಮೀಜಿ ಗಾಣಕ್ಕೆ ಕೊಬ್ಬರಿ ಸುರಿದು ಚಾಲನೆ ನೀಡಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ವಿಶ್ವವನ್ನು ಜ್ಞಾನ ಆಳುತ್ತದೆ. ಜಗತ್ತಿನ ಜ್ಞಾನವನ್ನು ನಾವು ಹೊಂದದೇ ಹೋದರೆ ಹಿಂದುಳಿಯುತ್ತೇವೆ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಫಸ್ಟ್ ಸರ್ಕಲ್ ಸೊಸೈಟಿ ಹಮ್ಮಿಕೊಂಡಿದ್ದ ‘ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ’ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು.
‘ಮೊದಲು ರಾಜಕೀಯ ಕ್ರಾಂತಿಗಳಾದವು. ಬಳಿಕ ವಿದ್ಯುತ್ ಕಂಡು ಹಿಡಿಯುವ ಮೂಲಕ ಕೈಗಾರಿಕಾ ಕ್ರಾಂತಿಯಾಯಿತು. ಆನಂತರ ಡಿಜಿಟಲ್ ಕ್ರಾಂತಿ ಬಂತು. ಈಗ ಕೃತಕ ಬುದ್ಧಿಮತ್ತೆ (ಎಐ) ಬಂದಿದೆ. ಕಾಲದ ಬದಲಾವಣೆಗಳಿಗೆ ಹೊಂದಿಕೊಂಡು ಮುಂದುವರಿಯಬೇಕು’ ಎಂದು ಸಲಹೆ ನೀಡಿದರು.
ಒಕ್ಕಲಿಗ ಸಮಾಜವು ಅನ್ನದಾತ ಸಮಾಜ. ಕೃಷಿಯ ಜೊತೆಗೆ ಅದಕ್ಕೆ ಪೂರಕವಾದ ಉದ್ಯಮಗಳಿಗೆ ಹಿಂದಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದ ಸಮುದಾಯ. ಇನ್ನು ಅನ್ನದಾತರಾಗುವುದರ ಜೊತೆಗೆ ಉದ್ಯೋಗದಾತರೂ ಆಗಬೇಕು. ಅದಕ್ಕಾಗಿ ಫಸ್ಟ್ ಸರ್ಕಲ್ ಎಂಬ ವಿಸ್ಮಯ ಹುಟ್ಟಿಕೊಂಡಿದೆ ಎಂದು ವಿವರಿಸಿದರು.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ‘ಒಕ್ಕಲಿಗರು ಶ್ರಮಜೀವಿಗಳು. ಅವರು ತಮ್ಮ ವೃತ್ತಿ ಮಾಡುತ್ತ ಸುಮ್ಮನಿದ್ದರೂ ಸ್ಥಾನಮಾನಗಳು ಸಿಗುತ್ತಿದ್ದವು. ಈಗ ಹೋರಾಟ ಮಾಡಬೇಕಾದ ಕಾಲದಲ್ಲಿ ಇದ್ದೇವೆ. ಕೃಷಿಕರಾಗುವುದಷ್ಟೇ ಅಲ್ಲದೇ ಕೃಷಿಯನ್ನೇ ಉದ್ಯಮವನ್ನಾಗಿ ಮಾಡಬೇಕು. ಬೇರೆ ಉದ್ಯಮಗಳಲ್ಲಿಯೂ ತೊಡಗಿಸಿಕೊಳ್ಳಬೇಕು’ ಎಂದರು.
ಫಸ್ಟ್ ಸರ್ಕಲ್ ಸೊಸೈಟಿ ಮಾರ್ಗದರ್ಶಕ ಜಯರಾಮ್ ರಾಯಪುರ ಮಾತನಾಡಿ, ‘ಸರ್ಕಾರದಿಂದ ಉದ್ಯೋಗ, ಸಹಾಯಧನಗಳು ಕಡಿಮೆಯಾಗುವ ಕಾಲದಲ್ಲಿ ನಾವೇ ಉದ್ಯೋಗ ನೀಡುವವರಾಗಬೇಕು. ಅದಕ್ಕಾಗಿ ಫಸ್ಟ್ ಸರ್ಕಲ್ ಸೊಸೈಟಿಯನ್ನು ದಕ್ಷಿಣ ಕರ್ನಾಟಕದ 14 ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಫಸ್ಟ್ ಸರ್ಕಲ್ ಸೊಸೈಟಿ ಅಧ್ಯಕ್ಷ ನಂದೀಶ್ ಎಸ್.ರಾಜೇಗೌಡ, ಶಾಸಕರಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಕೆ. ಗೋಪಾಲಯ್ಯ, ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ವಿಧಾನ ಪರಿಷತ್‌ನ ಮಾಜಿ ಸಭಾಪತಿ ಬಿ.ಎಲ್. ಶಂಕರ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ, ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಉಪಸ್ಥಿತರಿದ್ದರು.
ಗಮನ ಸೆಳೆದ ಪ್ರದರ್ಶನ: ಗಾಣದ ಎತ್ತುಗಳು, ಮಂಡ್ಯದ ಬೆಲ್ಲ, ವಿವಿಧ ಸಾಂಸ್ಕೃತಿಕ ವೇಷಗಳು, ಉದ್ಯೋಗ, ಉದ್ಯಮಗಳಿಗೆ ಸಂಬಂಧಿಸಿದ 200ಕ್ಕೂ ಅಧಿಕ ಮಳಿಗೆಗಳು ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.