ADVERTISEMENT

ವಿಧಾನಸೌಧಕ್ಕೆ ಮುತ್ತಿಗೆ: ಕ್ರಷರ್ ಮಾಲೀಕರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 16:12 IST
Last Updated 4 ಜನವರಿ 2023, 16:12 IST
ಸಿದ್ದರಾಜು
ಸಿದ್ದರಾಜು   

ಬೆಂಗಳೂರು: ಜಲ್ಲಿ, ಕಲ್ಲು ಮತ್ತು ಎಂ–ಸ್ಯಾಂಡ್ ಉತ್ಪಾದನೆ ಸ್ಥಗಿತಗೊಳಿಸಿ ಹತ್ತು ದಿನದಿಂದ ಪ್ರತಿಭಟನೆ ನಡೆಸುತ್ತಿರುವ ಸ್ಟೋನ್ ಕ್ರಷರ್ಸ್‌ ಮತ್ತು ಕ್ವಾರಿ ಮಾಲೀಕರು, ಸೋಮವಾರದ ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.

‘ಗಣಿ ಗುತ್ತಿಗೆದಾರರಿಂದ ರಾಜಧನ ಸಂಗ್ರಹಿಸುವುದನ್ನು ಸ್ಥಗಿತಗೊಳಿಸಬೇಕು ಹಾಗೂ ಕೆಎಂಎಂಸಿಆರ್- 1994ಕ್ಕೆ(ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ) ತಿದ್ದುಪಡಿ ತರಬೇಕು ಎಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಬೆಳಗಾವಿಯಲ್ಲಿ ನಡೆಸಿದ ಪ್ರತಿಭಟನೆಗೂ ಸರ್ಕಾರ ಕಿವಿಗೊಟ್ಟಿಲ್ಲ’ ಎಂದು ಬೆಂಗಳೂರು ನಗರ ಜಿಲ್ಲಾ ಸ್ಟೋನ್ ಕ್ರಷರ್ಸ್‌ ಆ್ಯಂಡ್ ಕ್ವಾರಿ ಓನರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಡಿ.ಸಿದ್ದರಾಜು ಬೇಸರ ವ್ಯಕ್ತಪಡಿಸಿದರು.

ಕಾಮಗಾರಿಗಳ ನಿರ್ವಹಣಾ ಇಲಾಖೆಗಳ ಮೂಲಕ 40 ವರ್ಷಗಳಿಂದ ರಾಜಧನ ಸಂಗ್ರಹ ಮಾಡಲಾಗುತ್ತಿದ್ದು, ಸರ್ಕಾರಕ್ಕೆ ಈಗಾಗಲೇ ರಾಜಧನ ಸಂದಾಯವಾಗಿದೆ. ಗಣಿ ಗುತ್ತಿಗೆದಾರರಿಂದ ಸುಮಾರು ₹6500 ಕೋಟಿಯಷ್ಟು ವಸೂಲಿ ಮಾಡಲು ಹೊರಟಿರುವುದು ಸರಿಯಲ್ಲ ಎಂದು ತಿಳಿಸಿದರು.

ADVERTISEMENT

ಕಾನೂನುಬದ್ಧ ಗಣಿಗಾರಿಕೆ ನಡೆಸುವುದಕ್ಕೆ ಪೂರಕ ನಿಯಮಗಳಿಲ್ಲ. ಈಗ ದೂರ ಸಂವೇದಿ ತಂತ್ರಜ್ಞಾನದ ಮೂಲಕ ಡ್ರೋನ್ ಸಮೀಕ್ಷೆ ನಡೆಸುವ ನಿಯಮಗಳಿಗೆ ತಿದ್ದುಪಡಿ ತಂದಿರುವುದು ಸೂಕ್ತವಾಗಿಲ್ಲ. ಜಿಯೊ ಫೆನ್ಸಿಂಗ್ ಹಾಗೂ ಮತ್ತಿತರ ಕ್ರಮಗಳಿಂದ ಉದ್ಯಮ ನಡೆಸುವುದೇ ಕಷ್ಟವಾಗಲಿದೆ ಎಂದು ಹೇಳಿದರು.

ಹತ್ತು ದಿನಗಳಿಂದ ಕಟ್ಟಡ ಕಲ್ಲು, ಎಂ-ಸ್ಯಾಂಡ್ ಉತ್ಪಾದನೆ ಮತ್ತು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಅವಲಂಬಿತ ಉದ್ಯಮಗಳು, ಕಾರ್ಮಿಕರು ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. 2500 ಕ್ರಷರ್‌ಗಳಿದ್ದು, ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ನೇರವಾಗಿ ತೊಂದರೆಗೆ ಸಿಲುಕಿದ್ದಾರೆ. ಪರೋಕ್ಷವಾಗಿಯೂ ಹಲವರು ತೊಂದರೆ ಅನುಭವಿಸುತ್ತಿದ್ದಾರೆ. ‌ಏರ್ ಶೋ, ಮೆಟ್ರೊ ರೈಲು ಕಾಮಗಾರಿ, ರಸ್ತೆ ಅಭಿವೃದ್ಧಿ ಸೇರಿ ಮೂಲಸೌಕರ್ಯ ಕಾಮಗಾರಿ ಮೇಲೂ ಪರಿಣಾಮ ಬೀರುತ್ತಿದೆ ಎಂದು ವಿವರಿಸಿದರು.‌

ಆದರೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಸರ್ಕಾರ ಇದೇ ಧೋರಣೆ ಮುಂದುವರಿಸಿದರೆ ಮೂರ್ನಾಲ್ಕು ದಿನಗಳಲ್ಲಿ ರಾಜ್ಯದ ಎಲ್ಲಾ ಸ್ಟೋನ್ ಕ್ರಷರ್ ಮಾಲೀಕರ ಸಭೆ ಕರೆಯಲಾಗುವುದು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಕೆಂಚಪ್ಪ, ಉಮಾಶಂಕರ, ಗೋವಿಂದರಾಜು, ಮಧುಸೂದನ, ಹೊಂಬೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.