ADVERTISEMENT

ಮೆಟ್ರೊ ರೈಲಿಗೆ ಕಲ್ಲು ತೂರಾಟ: ತಡೆಗೋಡೆ ಎತ್ತರಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 21:35 IST
Last Updated 19 ಮಾರ್ಚ್ 2022, 21:35 IST
ಮೆಟ್ರೊ ರೈಲು
ಮೆಟ್ರೊ ರೈಲು   

ಬೆಂಗಳೂರು: ಚಲಿಸುವ ಮೆಟ್ರೊ ರೈಲಿಗೆ ಕೆಲವೆಡೆ ಕಿಡಿಗೇಡಿಗಳು ಕಲ್ಲು ತೂರುತ್ತಿದ್ದು, ಇದನ್ನು ತಡೆಯಲು ತಡೆಗೋಡೆಗಳ ಎತ್ತರವನ್ನು ಇನ್ನಷ್ಟು ಹೆಚ್ಚಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂದಾಗಿದೆ.

ಎತ್ತರಿಸಿದ ರೈಲು ಮಾರ್ಗದಿಂದ ನೆಲದೊಳಗಿನ ಮಾರ್ಗಕ್ಕೆ ಇಳಿಯುವ ಜಾಗದಲ್ಲಿ ನೆಲ ಮಟ್ಟಕ್ಕೆ ರೈಲುಗಳ ಬರುತ್ತವೆ. ಅದೇ ಜಾಗದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ.ಸಂಪಿಗೆ ರಸ್ತೆ ಮತ್ತು ಮಾಗಡಿ ರಸ್ತೆಯಲ್ಲಿ ವರ್ಷದಲ್ಲಿ ನಾಲ್ಕರಿಂದ ಐದು ಬಾರಿ ಈ ರೀತಿಯ ಪ್ರಕರಣಗಳು ನಡೆದಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಡೆಗೋಡೆಗಳ ಬಳಿಕಿಡಿಗೇಡಿಗಳು ಅವಿತು ಕುಳಿತು ಕಲ್ಲು ತೂರಿ ಪರಾರಿಯಾಗುತ್ತಿದ್ದಾರೆ. ಈ ರೀತಿ ನೆಲ ಮಟ್ಟಕ್ಕೆ ರೈಲು ಬರುವ ಜಾಗಕ್ಕೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ತಡೆಗೋಡೆಗಳನ್ನು ಎತ್ತರಿಸುವ ಕೆಲಸವನ್ನೂ ಮಾಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಕಲ್ಲು ತೂರಿದಾಗ ಗಾಜುಗಳು ಪುಡಿಯಾಗಿ ರೈಲಿನೊಳಕ್ಕೆ ಕಲ್ಲು ಬಂದಿಲ್ಲ. ಗುಣಮಟ್ಟದ ಗಾಜುಗಳನ್ನು ಅಳವಡಿಸಿರುವುದರಿಂದ ಹೊರಭಾಗದಲ್ಲಿ ಸ್ವಲ್ಪ ಸೀಳು ಬಿಟ್ಟಿವೆ. ಟ್ರಿಪ್ ಮುಗಿಸಿ ಡಿಪೊಗೆ ಹೋದ ಕೂಡಲೇ ಗಾಜುಗಳನ್ನು ಬದಲಿಸಲಾಗುತ್ತಿದೆ ಎಂದು ವಿವರಿಸಿದರು.

ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಈಗ ಕಿಡಿಗೇಡಿಗಳು ಕಲ್ಲು ತೂರಲು ಅವಕಾಶ ಇಲ್ಲ. ಪ್ರಯಾಣಿಕರು ಯಾವುದೇ ಆತಂಕ ಪಡಬೇಕಿಲ್ಲ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.