ಕೆ.ಆರ್.ಪುರ: ಮಹದೇವಪುರ ಕ್ಷೇತ್ರದ ಕಾಡುಗೋಡಿ ಪ್ಲಾಂಟೇಷನ್ ದಿನ್ನೂರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ಒತ್ತುವರಿ ತೆರವು ಕಾರ್ಯವನ್ನು ನಿಲ್ಲಿಸುವಂತೆ ಕಾಂಗ್ರೆಸ್ ಮುಖಂಡ ನಲ್ಲೂರಹಳ್ಳಿ ನಾಗೇಶ್ ನೇತೃತ್ವದ ನಿಯೋಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
‘ಕಾಡುಗೋಡಿ ಪ್ಲಾಂಟೇಷನ್ ದಿನ್ನೂರಿನಲ್ಲಿ ಸುಮಾರು 70 ವರ್ಷಗಳಿಂದಲೂ ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳು ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಇಲ್ಲಿರುವ ಶೇ 80 ರಷ್ಟು ಪರಿಶಿಷ್ಟ ಜಾತಿಯ ಹೊಲೆಯ, ಮಾದಿಗ ಹಾಗೂ ಇನ್ನುಳಿದವರು ಅಲ್ಪಸಂಖ್ಯಾತ, ಹಿಂದುಳಿದ ಜಾತಿಗೆ ಸೇರಿದವರಾಗಿದ್ದಾರೆ. ದಿನಗೂಲಿ ಕೆಲಸ ಮಾಡಿಕೊಂಡಿರುವ ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸಬೇಡಿ’ ಎಂದು ನಲ್ಲೂರಹಳ್ಳಿ ನಾಗೇಶ್ ಮನವಿ ಮಾಡಿದರು.
ದಿನ್ನೂರು ಗ್ರಾಮದಲ್ಲಿ ಸರ್ಕಾರಿ ಶಾಲೆ, ದೇವಸ್ಥಾನ, ದರ್ಗಾ, ಚರ್ಚ್, ಸ್ಮಶಾನಗಳಿವೆ. ಅರಣ್ಯ ಇಲಾಖೆಯವರು ದಿನ್ನೂರು ಸುತ್ತಮುತ್ತಲಿನ ಜಮೀನನ್ನು ಸುಪರ್ದಿಗೆ ತೆಗೆದುಕೊಂಡಿದ್ದರಿಂದ ಗ್ರಾಮದ ನಿವಾಸಿಗಳು ಭಯಭೀತರಾಗಿದ್ದಾರೆ. ಮನೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ತಕ್ಷಣವೇ ಒತ್ತುವರಿ ತೆರವು ಕಾರ್ಯ ನಿಲ್ಲಿಸುವಂತೆ’ ಅವರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರ್ ಖಂಡ್ರೆ ಅವರು, ‘ದಿನ್ನೂರಿನಲ್ಲಿ ಮನೆಗಳು, ದೇವಸ್ಥಾನ, ದರ್ಗಾ, ಸ್ಮಶಾನವನ್ನು ಕೆಡುವುದಿಲ್ಲ. ಸದ್ಯ ದಿನ್ನೂರು ಗ್ರಾಮಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸುವೆ’ ಎಂದರು.
ಬಿಬಿಎಂಪಿ ಮಾಜಿ ಸದಸ್ಯ ಉದಯಕುಮಾರ್, ಕೆಪಿಸಿಸಿ ಸದಸ್ಯ ಜಯರಾಮ್ ರೆಡ್ಡಿ, ಗುಂಜೂರು ರಾಮಕೃಷ್ಣಪ್ಪ, ಬಾಬುಗೌಡ, ವಿಟಿಬಿ ಬಾಬು, ಮುರಳಿ, ಅಭಿಲಾಷ್ ನಿಯೋಗದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.