ADVERTISEMENT

2 ಸಾವಿರ ಹೆಕ್ಟೇರ್‌ ತೋಟಗಾರಿಕೆ ಬೆಳೆಗೆ ಹಾನಿ

ಗಾಳಿ– ಮಳೆ: 598 ಹೆಕ್ಟೇರ್ ಮಾವು, 487 ಹೆಕ್ಟೇರ್‌ನಲ್ಲಿ ಬಾಳೆ ಬೆಳೆ ನಾಶ

ಗಾಣಧಾಳು ಶ್ರೀಕಂಠ
Published 8 ಜೂನ್ 2025, 20:01 IST
Last Updated 8 ಜೂನ್ 2025, 20:01 IST
ಗುಂಡ್ಲುಪೇಟೆ ತಾಲ್ಲೂಕಿನ ಶೀಲವಂತಪುರದ ಸಿದ್ದು ಅವರ ಜಮೀನಿನಲ್ಲಿ ಹಾನಿಗೊಳಗಾಗಿರುವ ಬಾಳೆ ಬೆಳೆ
ಗುಂಡ್ಲುಪೇಟೆ ತಾಲ್ಲೂಕಿನ ಶೀಲವಂತಪುರದ ಸಿದ್ದು ಅವರ ಜಮೀನಿನಲ್ಲಿ ಹಾನಿಗೊಳಗಾಗಿರುವ ಬಾಳೆ ಬೆಳೆ   

ಬೆಂಗಳೂರು: ‘ಎರಡು ತಿಂಗಳ ಹಿಂದೆ ಸುರಿದ ಬಿರುಗಾಳಿ ಮಳೆಗೆ ನಾಲ್ಕು ಎಕರೆಯಲ್ಲಿದ್ದ ಬಾಳೆ ಗಿಡಗಳು ಮುರಿದುಬಿದ್ದವು. ಸುಮಾರು ಮೂರು ಲಕ್ಷ ರೂಪಾಯಿ ನಷ್ಟವಾಯಿತು...’

‌ಮುಂಗಾರು ಪೂರ್ವ ಮಳೆ– ಗಾಳಿಯ ಏಟಿಗೆ ಬಾಳೆ ಗಿಡಗಳನ್ನು ಕಳೆದುಕೊಂಡ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಶೀಲವಂತರಪುರದ ಕೃಷಿಕ ಸಿದ್ದು ಅವರ ಸಂಕಟದ ನುಡಿಗಳಿವು.

‘ಸಾವಯವ ವಿಧಾನದಲ್ಲಿ ಎರಡು ಸಾವಿರ ನೇಂದ್ರ ತಳಿ ಬಾಳೆಯ ಗಿಡಗಳನ್ನು ಬೆಳೆದಿದ್ದೆ. ಎಲ್ಲವೂ ಮಾತೆ ಬಿಡುವ ಹಂತದಲ್ಲಿದ್ದವು. ಇನ್ನೆರಡು ತಿಂಗಳಲ್ಲಿ ಗೊನೆ ಬಿಟ್ಟು, ಕೊಯ್ಲಿಗೆ ಬರುತ್ತಿದ್ದವು. ಅಷ್ಟರಲ್ಲಿ ಮಳೆ ಗಾಳಿಯಿಂದ ಬಾಳೆ ನಾಶವಾಯಿತು’ ಎಂದು ವಿವರಿಸಿದರು ಸಿದ್ದು.

ADVERTISEMENT

ಮುಂಗಾರು ಪೂರ್ವ ಮಳೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಬಾಳೆ, ಹಾವೇರಿ ಜಿಲ್ಲೆಯಲ್ಲಿ ಪಪ್ಪಾಯ, ಕೊಪ್ಪಳ, ಬೀದರ್ ಜಿಲ್ಲೆಯಲ್ಲಿ ಮಾವಿನ ಬೆಳೆಗೆ ಹೆಚ್ಚು ಹಾನಿಯಾಗಿದೆ. ಕೆಲವು ಕಡೆ ಆಲಿಕಲ್ಲು ಮಳೆಯಾದ ಕಾರಣ, ಬಲಿತು ಕಟಾವಿಗೆ ಬರಬೇಕಾದ ಮಾವಿನ ಕಾಯಿಗಳು ಉದುರಿವೆ.

ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ನಡೆಸುತ್ತಿರುವ ಸಮೀಕ್ಷೆ ಪ್ರಕಾರ ಕಳೆದ ಮಾರ್ಚ್‌ನಿಂದ ಈವರೆಗೆ ರಾಜ್ಯದ ವಿವಿಧೆಡೆ ಎರಡು ಸಾವಿರ ಹೆಕ್ಟೇರ್‌ಗೂ ಹೆಚ್ಚು ತೋಟಗಾರಿಕೆ ಬೆಳೆ ಹಾನಿಯಾಗಿದೆ. ₹44 ಕೋಟಿಗೂ ಅಧಿಕ ನಷ್ಟವಾಗಿದೆ. ರಾಜ್ಯದ ನಾಲ್ಕೈದು ಜಿಲ್ಲೆಗಳಲ್ಲಿ ಹಾನಿ ಪ್ರಮಾಣ ಹೆಚ್ಚಾಗಿದೆ. ಇದು ಮಾರ್ಚ್‌- ಏಪ್ರಿಲ್ ತಿಂಗಳಲ್ಲಿ ಆಗಿರುವ ನಷ್ಟ ಎಂದು‌ ಇಲಾಖೆಯ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಒಟ್ಟು 598 ಹೆಕ್ಟೇರ್ ಪ್ರದೇಶದಲ್ಲಿ ಮಾವು, 487 ಹೆಕ್ಟೇರ್‌ನಲ್ಲಿ ಬಾಳೆ ಬೆಳೆಗೆ ಹಾನಿಯಾಗಿದೆ. ಸುಮಾರು 321 ಹೆಕ್ಟೇರ್‌ನಷ್ಟು ಪಪ್ಪಾಯ ಬೆಳೆ ಮಣ್ಣುಪಾಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 62 ಹೆಕ್ಟೇರ್‌ನಲ್ಲಿ ನಿಂಬೆ, 40 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಕ್ಯಾಬೇಜ್‌, ಟೊಮೆಟೊದಂತಹ ತರಕಾರಿಗಳು, ಕಲ್ಲಂಗಡಿ,‌‌ ದ್ರಾಕ್ಷಿ, ಸೀಬೆಯಂತಹ ಹಣ್ಣಿನ ಬೆಳೆಗಳು ಆಲಿಕಲ್ಲು ಮಳೆಗೆ ಹಾನಿಗೀಡಾಗಿವೆ. ಬಹುತೇಕ ಎಲ್ಲ ಬೆಳೆಗಳು ಕೊಯ್ಲಿನ ಹಂತದಲ್ಲಿದ್ದವು. ಕೊಯ್ಲು ಮಾಡಿ ಮಾರುಕಟ್ಟೆ ತಲುಪಬೇಕಿದ್ದ ಫಸಲು ಮಣ್ಣುಪಾಲಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ಬೀದರ್ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 300 ಹೆಕ್ಟೇರ್‌ನಷ್ಟು ಮಾವು ನಾಶವಾಗಿದೆ. ಮಳೆಯ ರಭಸಕ್ಕೆ ಬಲಿತ ಕಾಯಿಗಳೆಲ್ಲ ರಾಶಿ ರಾಶಿಯಾಗಿ ಉದುರಿ ಬಿದ್ದವು. ಏಪ್ರಿಲ್‌–ಮೇ ತಿಂಗಳಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಕೊಪ್ಪಳ ಜಿಲ್ಲೆಯ ಕನಕಗಿರಿ, ಗಂಗಾವತಿ ಸುತ್ತಮುತ್ತ ಮಾವಿನ ಫಸಲಿಗೆ ಹೆಚ್ಚು ಹಾನಿಯಾಗಿದೆ. ಏಪ್ರಿಲ್ ತಿಂಗಳೊಂದರಲ್ಲೇ 125 ಹೆಕ್ಟೇರ್‌ನಷ್ಟು ಮಾವಿನ ಬೆಳೆ ನಷ್ಟವಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ಭಾಗದಲ್ಲಿ ಮಾವಿನ ಮರಗಳಲ್ಲಿ ಹೆಚ್ಚು ಕಾಯಿಗಳು ಉದುರಿವೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಶೀಲವಂತಪುರ ಸುತ್ತಮುತ್ತಲಿನ ಹಳ್ಳಿಗಳಲ್ಲಿ 50 ಎಕರೆಗೂ ಹೆಚ್ಚು ಬಾಳೆಗೆ ಹಾನಿಯಾಗಿದೆ. ಒಬ್ಬೊಬ್ಬ ರೈತರದ್ದು ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಕಚ್ಚಿವೆ ಎಂದು ಗುಂಡ್ಲುಪೇಟೆಯ ಕೃಷಿಕ ನಾಗಾರ್ಜುನ್ ಮಾಹಿತಿ ನೀಡಿದರು.

ಬೆಳೆ ವಿಮೆ ಮಾಡಿಸಿದರೆ ಪರಿಹಾರ

’ ‌‘ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ (ಪಿಎಂಎಫ್‌ಬಿವೈ) ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ(ಡಬ್ಲ್ಯುಬಿಸಿಐಎಸ್‌) ಮಾಡಿಸಿ ಪ್ರೀಮಿಯಂ ಭರ್ತಿ ಮಾಡಿದ್ದರೆ ಮುಂಗಾರು – ಹಿಂಗಾರಿನಲ್ಲಿ ಬೆಳೆ ನಷ್ಟವಾದಾಗ ಪರಿಹಾರ ಪಡೆಯಬಹುದು’ ಎಂದು ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಹೇಳಿದರು. ‘ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿಗೆ ಮುನ್ನವೇ ಬೆಳೆ ವಿಮೆ ಮಾಡಿಸುವ ಕುರಿತು ಇಲಾಖೆಯಿಂದ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಎಲ್ಲರೂ ಬೆಳೆ ವಿಮೆ ಮಾಡಿಸಬೇಕು’ ಎಂದು ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.