ADVERTISEMENT

Vidhana Soudha Book Fair: ಪುಸ್ತಕ ಖರೀದಿಗೆ ಶಾಸಕರ ನಿರಾಸಕ್ತಿ

ಸಾಹಿತ್ಯ ಪ್ರೇಮಿಗಳಿಂದ ಉತ್ತಮ ಸ್ಪಂದನೆ, 15 ಸಾವಿರಕ್ಕೂ ಹೆಚ್ಚು ಜನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2025, 0:13 IST
Last Updated 2 ಮಾರ್ಚ್ 2025, 0:13 IST
ಸಾರ್ವಜನಿಕರು ವಿಧಾನಸಭೆ ಅಧಿವೇಶನ ನಡೆಯುವ ಸಭಾಂಗಣವನ್ನು ವೀಕ್ಷಿಸಿದರು.
ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್
ಸಾರ್ವಜನಿಕರು ವಿಧಾನಸಭೆ ಅಧಿವೇಶನ ನಡೆಯುವ ಸಭಾಂಗಣವನ್ನು ವೀಕ್ಷಿಸಿದರು. ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್   

ಬೆಂಗಳೂರು: ವಿಧಾನಸೌಧ ಆವರಣದಲ್ಲಿ ನಡೆಯುತ್ತಿರುವ ‘ಪುಸ್ತಕ ಮೇಳ’ಕ್ಕೆ ಸಾಹಿತ್ಯ ಪ್ರೇಮಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆದರೆ, ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಮಳಿಗೆಗಳಿಗೆ ಭೇಟಿ ನೀಡಿದ್ದು, ಪುಸ್ತಕ ಖರೀದಿಸಲು ಆಸಕ್ತಿ ತೋರುತ್ತಿಲ್ಲ.

ಪುಸ್ತಕ ಜಾತ್ರೆಯ ಮೂರನೇ ದಿನವಾದ ಶನಿವಾರ ನಗರ ಮಾತ್ರವಲ್ಲದೇ, ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು. ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಅಧಿಕಾರಿಗಳು, ನೌಕರರು ವಿಧಾನಸೌಧಕ್ಕೆ ಭೇಟಿ ನೀಡಿದರು. 15 ಸಾವಿರಕ್ಕೂ ಹೆಚ್ಚು ಜನರು ಶಕ್ತಿಸೌಧದ ಆವರಣ ತುಂಬ ಕಿಕ್ಕಿರಿದು ನೆರೆದಿದ್ದರು. ಪುಸ್ತಕ ಮಳಿಗೆಗಳಲ್ಲಿ ಜನವೋ ಜನ.

ಮೇಳಕ್ಕೆ ಅನೇಕರು ಕುಟುಂಬ ಸಮೇತ ಬಂದಿದ್ದರು. ಮಳಿಗೆಗಳಲ್ಲಿ ಪ್ರಕಾಶಕರು, ಮಾಲೀಕರ ಜತೆ ಚರ್ಚೆ ನಡೆಸಿ, ತಮ್ಮಿಷ್ಟದ ಪುಸ್ತಕಗಳನ್ನು ಕೊಂಡುಕೊಂಡರು. ಕೆಲವರು ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತ, ಚಂದ್ರಶೇಖರ ಕಂಬಾರ, ಎಸ್‌.ಎಲ್. ಭೈರಪ್ಪ ಸೇರಿದಂತೆ ತಮ್ಮ ನೆಚ್ಚಿನ ಕಾದಂಬರಿಕಾರ ಮತ್ತು ಕವಿಗಳ ಪುಸ್ತಕಗಳಿಗಾಗಿ ಮಳಿಗೆಗಳಿಗೆ ಎಡತಾಕಿದರು. ಹಿರಿಯ ಅಧಿಕಾರಿಗಳು ಕೂಡ ಮೇಳದಲ್ಲಿ ಸುತ್ತು ಹಾಕಿದರು.

ADVERTISEMENT

ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಮೇಳಕ್ಕೆ ಬಂದಿದ್ದರು. ಮಧ್ಯಾಹ್ನದ ವೇಳೆಗೆ ಮಳಿಗೆಗಳಲ್ಲಿ ಜನದಟ್ಟಣೆ ಉಂಟಾಗಿತ್ತು. ಸಂಜೆಯ ಹೊತ್ತಿಗೆ ಮಳಿಗೆಗಳು ಮಾತ್ರವಲ್ಲದೆ, ವಿಧಾನಸೌಧದ ಆವರಣ ಜನರಿಂದ ತುಂಬಿತ್ತು. ಸಂಭ್ರಮದಿಂದ ಮಳಿಗೆಗಳಿಗೆ ಓಡಾಡಿ, ನೆಚ್ಚಿನ ಲೇಖಕರ ಪುಸ್ತಕಗಳೊಂದಿಗೆ ಮನೆಗೆ ತೆರಳಿದರು.

‘ಬಹುತೇಕ ಮಳಿಗೆಗಳು ಶೇಕಡ 25ರಷ್ಟು ರಿಯಾಯಿತಿ ನೀಡಿರುವುದರಿಂದ ಓದುಗರಿಂದ ಪುಸ್ತಕ ಮೇಳಕ್ಕೆ ಉತ್ತಮ ಪ್ರತ್ರಿಕ್ರಿಯೆ ದೊರೆತಿದೆ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯ ಪುಸ್ತಕಗಳು ಲಭ್ಯ ಇವೆ. ಎರಡು ದಿನಗಳಿಂದ ಪುಸ್ತಕ ಪ್ರೇಮಿಗಳು ಭೇಟಿ ನೀಡುತ್ತಿದ್ದಾರೆ’ ಎಂದು ಪ್ರಕಾಶಕ ಪ್ರವೀಣ್ ತಿಳಿಸಿದರು.

ಮೊಗಸಾಲೆ ವೀಕ್ಷಣೆಗೆ ಜನಸಾಗರ

ಬೆಂಗಳೂರು: ಪುಸ್ತಕ ಮೇಳದ ನೆಪದಲ್ಲಿ ವಿಧಾನಸೌಧವನ್ನು ವೀಕ್ಷಿಸಲು ಜನಸಾಗರವೇ ಹರಿದು ಬಂದಿತ್ತು. ಭದ್ರತೆಯ ಕಾರಣಕ್ಕೆ ಮಧ್ಯಾಹ್ನ 3 ಗಂಟೆವರೆಗೆ ಮೊಗಸಾಲೆ ವೀಕ್ಷಣೆಗೆ ಅವಕಾಶ ನೀಡಿರಲಿಲ್ಲ. ಬಳಿಕ ಅವಕಾಶ ನೀಡಲಾಯಿತು.

ಅಲ್ಲಿಯವರೆಗೂ ಪುಸ್ತಕ ಪ್ರೇಮಿಗಳು ಹಾಗೂ ಜನ ಸಾಮಾನ್ಯರು ವಿಧಾನಸೌಧದ ಆವರಣದಲ್ಲಿ ಸರದಿ ಸಾಲಿನಲ್ಲಿ ಬಿಸಿಲಿನಲ್ಲಿಯೇ ನಿಂತಿದ್ದರು. ಪುಸ್ತಕ ಮೇಳದ ಪೂರ್ವ ಭಾಗದಿಂದ ಒಳಗೆ ಬಂದವರು ಮೊದಲ ಮಹಡಿ ಪ್ರವೇಶಿಸಿ ಅಲ್ಲಿಂದ ವಿಧಾನಸಭೆ ಅಧಿವೇಶನದ ಮೊಗಸಾಲೆಗೆ ಪ್ರವೇಶಿಸಿ ವೀಕ್ಷಿಸಿದರು. ಅಧಿವೇಶನ ಹೇಗೆ ನಡೆಯುತ್ತದೆ ಎನ್ನುವ ಮಾಹಿತಿಯನ್ನು ಕೇಳಿ ಪಡೆದರು. ಬಳಿಕ ವಿಧಾನಸೌಧ ಒಂದು ಸುತ್ತು ಹಾಕಿ ಫೋಟೊ ತೆಗೆಸಿಕೊಂಡರು. 

ಪುಸ್ತಕ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಟ್ಸ್‌ಆ್ಯಪ್ ಫೇಸ್‌ಬುಕ್ ಬಂದ ಬಳಿಕ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಯಿತು ಎಂಬ ಭಾವನೆ ಇತ್ತು. ಆದರೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಪುಸ್ತಕ ಪ್ರೇಮಿಗಳು ಭೇಟಿ ನೀಡುತ್ತಿದ್ದಾರೆ. ಸ್ಪೀಕರ್ ಯು.ಟಿ.ಖಾದರ್ ಅವರು ಒಳ್ಳೆಯ ಪ್ರಯತ್ನ ಮಾಡಿದ್ದಾರೆ.
ಡಿ.ನಿಂಗರಾಜ್, ಚಿಂತನ ಚಿತ್ತಾರ ಪ್ರಕಾಶಕ
ಸಾಹಿತ್ಯ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗೆ ಭೇಟಿ ನೀಡುತ್ತಿದ್ದಾರೆ. ಒಳ್ಳೆಯ ವ್ಯಾಪಾರವಾಗುತ್ತಿದೆ. ಆದರೆ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ₹2 ಲಕ್ಷದವರೆಗೂ ಪುಸ್ತಕಗಳನ್ನು ಖರೀದಿಸುವ ಅವಕಾಶವಿದ್ದರೂ ಶಾಸಕರು ಯಾರೂ ಪುಸ್ತಕ ಖರೀದಿಸಲು ಬಂದಿಲ್ಲ. ಪುಸ್ತಕಗಳನ್ನು ಖರೀದಿಸಿ ಸರ್ಕಾರಿ ಶಾಲೆ ಗ್ರಂಥಾಲಯಕ್ಕೆ ನೀಡಬಹುದು.
ಬಸವರಾಜ ಸೂಳಿಭಾವಿ, ಲಡಾಯಿ ಪ್ರಕಾಶನ
ಮಳಿಗೆಗೆ ಶಾಸಕರು ಭೇಟಿ ನೀಡಿ ಹೋದರು. ನಂತರ ಯಾರೂ ಬಂದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ವಿದ್ಯಾರ್ಥಿಗಳು ಖರೀದಿಸುತ್ತಿದ್ದಾರೆ. ಕನ್ನಡ ಇಂಗ್ಲಿಷ್ ಹಿಂದಿ ಪುಸ್ತಕಗಳು ಲಭ್ಯ ಇವೆ.
ಸುಮನಾ, ಪ್ರಕಾಶಕಿ, ನ್ಯಾಷನಲ್ ಬುಕ್ ಹೌಸ್
ವಿಧಾನಸೌಧದ ಆವರಣದೊಳಗೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿರುವುದು ಖುಷಿಯಾಗಿದೆ. ಕಲೆ ಸಾಹಿತ್ಯ ಸಂಸ್ಕೃತಿ ವಿಜ್ಞಾನ ವಿಷಯದ ಪುಸ್ತಕಗಳು ಮೇಳದಲ್ಲಿ ಲಭ್ಯವಿವೆ. ನಮಗೆ ಇಷ್ಟದ ಲೇಖಕರ ಪುಸ್ತಕಗಳನ್ನು ಕೊಂಡುಕೊಳ್ಳಬಹುದು. –
ನೇತ್ರಾಲಕ್ಷ್ಮೀ, ವಿದ್ಯಾರ್ಥಿನಿ, ಸರ್ಕಾರಿ ಕಲಾ ಕಾಲೇಜು ಬೆಂಗಳೂರು

ಪುಸ್ತಕ ಮೇಳದಲ್ಲಿ ಸಾಹಿತ್ಯ ಪ್ರಿಯರು ಪುಸ್ತಕಗಳನ್ನು ಖರೀದಿಸಿದರು. ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.