ADVERTISEMENT

‘ಗಂಟಿ’ಯನ್ನು ಹುಡುಕಿ ಕೊಡುತ್ತೀರಾ?

ಬೀದಿನಾಯಿಗಾಗಿ ₹ 10 ಸಾವಿರ ಇನಾಮು ಕೊಡಲೂ ಸಿದ್ಧ ಈ ಟೆಕಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 20:32 IST
Last Updated 30 ಏಪ್ರಿಲ್ 2019, 20:32 IST
ಕಾಣೆಯಾಗಿರುವ ಬೀದಿನಾಯಿ ‘ಗಂಟಿ’
ಕಾಣೆಯಾಗಿರುವ ಬೀದಿನಾಯಿ ‘ಗಂಟಿ’   

ಬೆಂಗಳೂರು: ಸಾಕುನಾಯಿಗಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡುವವರನ್ನು ನೋಡಿರುತ್ತೀರಿ. ಆದರೆ ಬೀದಿನಾಯಿಗಳ ಬಗ್ಗೆಯೂ ಇಷ್ಟೇ ಕಾಳಜಿ ತೋರಿಸುವವರು ಬಲು ಅಪರೂಪ. ಕಲ್ಯಾಣನಗರ ಬಳಿಯ ಬಾಬೂಸಾಪಾಳ್ಯದ ಟೆಕಿಯೊಬ್ಬರು ಕಾಣೆಯಾದ ಬೀದಿನಾಯಿಯನ್ನು ಹುಡುಕಿಕೊಟ್ಟವರಿಗೂ ₹ 10 ಸಾವಿರ ಇನಾಮು ಕೊಡುವುದಕ್ಕೂ ಸಿದ್ಧರಿದ್ದಾರೆ.

ಬೀದಿನಾಯಿ ಹಾವಳಿ ಬಗ್ಗೆ ದೂರುವವರ ನಡುವೆ ಈ ವ್ಯಕ್ತಿಗೆ ಈ ನಾಯಿ ಬಗ್ಗೆ ಏಕಿಷ್ಟು ಪ್ರೀತಿ ಎಂದು ಅಚ್ಚರಿಯಾಗಬಹುದು. ಅವರ ಮಾತಿನಲ್ಲೇ ಹೇಳುವುದಾದರೆ, ‘ಆ ನಾಯಿ ತೋರಿಸುತ್ತಿದ್ದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ’.

ಪ್ರೀತಿಯ ಗಂಟಿ: ‘ಆ ನಾಯಿ ಪುಟ್ಟ ಮರಿ ಇದ್ದಾಗಿನಿಂದಲೂ ನೋಡಿದ್ದೇವೆ. ಅದರಷ್ಟು ಒಳ್ಳೆ ಬುದ್ಧಿಯ ಸೌಮ್ಯ ಸ್ವಭಾವದ ಮತ್ತೊಂದು ಬೀದಿನಾಯಿಯನ್ನು ನಾನು ನೋಡಿಲ್ಲ. ನಾನೊಬ್ಬನೇ ಅಲ್ಲ, ಬಾಬೂಸಾಪಾಳ್ಯದ ಗಣೇಶ ಮಂದಿರ ಬಳಿ ಅಷ್ಟು ನಿವಾಸಿಗಳೂ ಆ ನಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ’ ಎನ್ನುತ್ತಾರೆ ಸಾಫ್ಟ್‌ವೇರ್‌ ಎಂಜಿನಿಯರ್‌ ಅನುರಾಗ್‌.

ADVERTISEMENT

‘ನಾವು ಆ ನಾಯಿಯ ಕೊರಳಿಗೆ ಗಂಟೆಯೊಂದನ್ನು ಕಟ್ಟಿದ್ದೆವು. ಅದನ್ನು ಎಲ್ಲರೂ ಪ್ರೀತಿಯಿಂದ ‘ಗಂಟಿ’ ಎಂದೇ ಕರೆಯುತ್ತಿದ್ದರು. ಅದು ಒಂದು ಮನೆಯ ನಾಯಿ ಆಗಿರಲಿಲ್ಲ. ನಮ್ಮ ವಠಾರದ ಅಷ್ಟೂ ಮಂದಿಯ ಜೊತೆಯೂ ಗಂಟಿ ಖುಷಿಯಿಂದ ಆಡುತ್ತಿತ್ತು. ವಠಾರದವರೆಲ್ಲೂ ಅದಕ್ಕೆ ತಿಂಡಿ ತಿನಿಸು ಹಾಕುತ್ತಿದ್ದರು. ಇಡೀ ಬೀದಿಯ ಪ್ರೀತಿಯ ಗಂಟಿ ಆಗಿತ್ತು’ ಎನ್ನುವಾಗ ಅವರ ಧ್ವನಿ ಗದ್ಗದಿತವಾಯಿತು.

‘ಮಾರ್ಚ್‌ 20ರಂದು ವಾಹನದಲ್ಲಿ ಬಂದ ನಾಲ್ವರು ಯುವಕರು ಅದನ್ನು ಸಂತಾನಶಕ್ತಿ ಹರಣ ಚಿಕಿತ್ಸೆ ಸಲುವಾಗಿ ಹಿಡಿದುಕೊಂಡು ಹೋದರು. ಅದಕ್ಕೆ 10 ವರ್ಷಗಳಾಗಿವೆ. ಶಸ್ತ್ರಚಿಕಿತ್ಸೆ ತಾಳಿಕೊಳ್ಳುವ ಶಕ್ತಿ ಅದಕ್ಕೆ ಇಲ್ಲ ಎಂದರೂ ಕೇಳಲಿಲ್ಲ. ಮೂರು ದಿನಗಳಲ್ಲಿ ವಾಪಾಸ್‌ ತಂದು ಬಿಡುವುದಾಗಿ ಹೇಳಿದರು. ಇದಾಗಿ ಒಂದೂವರೆ ತಿಂಗಳು ಕಳೆದರೂ ಗಂಟಿ ಪತ್ತೆಯೇ ಇಲ್ಲ’ ಎಂದರು.

‘ನಾಯಿಯನ್ನು ವಾಪಾಸ್‌ ತಂದು ಬಿಡದ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ನಮ್ಮ ಪ್ರದೇಶದ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಉಸ್ತುವಾರಿ ನೋಡಿಕೊಳ್ಳುವ ಸಂಸ್ಥೆಯನ್ನು ವಿಚಾರಿಸಿದ್ದೇವೆ. ನಾಯಿ ಎಲ್ಲಿಗೆ ಹೋಯಿತು ಎಂಬ ಬಗ್ಗೆ ಯಾರೂ ಸಮರ್ಪಕ ಉತ್ತರ ನೀಡುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಯಾವುದೇ ನಾಯಿಯನ್ನು ಶಸ್ತ್ರಚಿಕಿತ್ಸೆ ಒಯ್ದರೆ ಮತ್ತೆ ಅದೇ ಜಾಗದಲ್ಲಿ ತಂದು ಬಿಡಬೇಕು. ಅದನ್ನು ಹಿಡಿಯುವ ಮುನ್ನ ಸ್ಥಳೀಯರಿಂದ ಸಹಿ ಪಡೆಯಬೇಕು. ಶಸ್ತ್ರಚಿಕಿತ್ಸೆ ಬಳಿಕ ನಾಯಿಯನ್ನು ಅದೇ ಜಾಗದಲ್ಲಿ ಬಿಟ್ಟ ಬಗ್ಗೆ ಸಹಿ ಪಡೆದ ವ್ಯಕ್ತಿಗೆ ಮಾಹಿತಿ ನೀಡಬೇಕು ಎಂಬ ನಿಯಮ ಇದೆ’ ಎಂದರು ಬಿಬಿಎಂಪಿ ಹೆಚ್ಚುವರಿ ಆಯುಕ್ತ ರಂದೀಪ್‌.

‘ಶಸ್ತ್ರಚಿಕಿತ್ಸೆಗೆ ಒಯ್ದ ನಾಯಿಗಳನ್ನು ಮತ್ತೆ ಅದೇ ಜಾಗಕ್ಕೆ ತಂದು ಬಿಡದ ಬಗ್ಗೆ ಆಗಾಗ್ಗ ದೂರುಗಳು ಬರುತ್ತಿರುತ್ತವೆ. ಆದರೆ, ಬಬೂಸಪಾಳ್ಯದಲ್ಲಿ ನಾಯಿ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ದೂರು ಬಂದರೆ ಪರಿಶೀಲಿಸುತ್ತೇನೆ’ ಎಂದರು.

‘ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಸಂಸ್ಥೆ ಇದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಯಾವುದಾದರೂ ನಾಯಿಯನ್ನು ಒಯ್ದು ಮತ್ತೆ ಅದೇ ಜಾಗದಲ್ಲಿ ಬಿಡದಿದ್ದರೆ, ಅಂತಹ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದರು.

*
ನಮ್ಮ ಬೀದಿಯಲ್ಲಿ ‘ಗಂಟಿ’ ಇಲ್ಲದಿರುವುದನ್ನು ಕಲ್ಪಿಸಿಕೊಳ್ಳಲಿಕ್ಕೂ ಆಗುತ್ತಿಲ್ಲ. ಅದನ್ನು ಹುಡುಕಿಕೊಟ್ಟವರಿಗೆ ₹ 10 ಸಾವಿರ ನೀಡುತ್ತೇನೆ.
–ಅನುರಾಗ್‌, ಸಾಫ್ಟ್‌ವೇರ್‌ ಎಂಜಿನಿಯರ್‌, ಬಾಬೂಸಾಪಾಳ್ಯ

*
ಶಸ್ತ್ರಚಿಕಿತ್ಸೆಗೆ ಒಯ್ಯುವ ನಾಯಿಗಳನ್ನು ಅದೇ ಸ್ಥಳದಲ್ಲಿ ಬಿಡಬೇಕು ಎಂಬ ನಿಯಮ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ.
–ರಾಮ್‌ಕುಮಾರ್‌ ಬಿ.ಕೆ, ಗ್ರೀನ್‌ರೋಡೀಸ್‌ ಫಾರ್ ಅನಿಮಲ್ಸ್‌ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.