ADVERTISEMENT

ಬೀದಿ ನಾಯಿ: ಬೇಡ ಭೀತಿ– ಇರಲಿ ಪ್ರೀತಿ

ಪ್ರಚೋದನೆ ಬೇಡ: ಸ್ವಭಾವ ಅರಿತು ಸಂಯಮದ ವರ್ತನೆ ಅಗತ್ಯ –ಕ್ಯೂಪಾ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 21:22 IST
Last Updated 20 ನವೆಂಬರ್ 2021, 21:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ನಡೆದುಕೊಂಡು ಹೋಗುವಾಗ, ದ್ವಿಚಕ್ರ ವಾಹನಗಳಲ್ಲಿ ಸಾಗುವಾಗ ಬೀದಿನಾಯಿಗಳು ಧುತ್ತೆಂದು ಮೇಲೆರಗುವ ಪ್ರಸಂಗಗಳು ಸರ್ವೇಸಾಮಾನ್ಯ. ಅನಿರೀಕ್ಷಿತವಾಗಿ ಎದುರಾಗುವ ಇಂತಹ ಇಕ್ಕಟ್ಟಿನ ಸಂದರ್ಭವನ್ನು ನಿಭಾಯಿಸುವುದು ಸವಾಲಿನ ಕೆಲಸ. ಆದರೆ, ಬೀದಿನಾಯಿಗಳೂ ಏಕೆ ಹೀಗೆ ಮಾಡುತ್ತವೆ ಎಂಬುದನ್ನು ತಿಳಿದುಕೊಂಡರೆ ಇದನ್ನು ಅಳುಕಿಲ್ಲದೆಯೇ ನಿಭಾಯಿಸಬಹುದು ಎನ್ನುತ್ತಾರೆ ಶ್ವಾನಪ್ರಿಯರು.

‘ನಾಯಿಗಳು ಮನುಷ್ಯರ ಮೇಲೆ ಎರಗುವುದು ಆತ್ಮರಕ್ಷಣೆಗಾಗಿ. ಬುದ್ಧಿ ಇರುವ ಮನುಷ್ಯನೂ ತನ್ನ ಆತ್ಮರಕ್ಷಣೆಗಾಗಿ ಪ್ರತಿ ದಾಳಿ ನಡೆಸಿದರೆ ಅವುಗಳು ಇನ್ನಷ್ಟು ಕ್ರೂರವಾಗಿ ವರ್ತಿಸುತ್ತವೆ. ಹಾಗಾಗಿ ನಾಯಿಗಳು ಬೊಗಳುತ್ತಾ ಎರಗುವಾಗ ಸಂಯಮದಿಂದ ವರ್ತಿಸಬೇಕು. ಒಂದೆರಡು ನಿಮಿಷ ಅಳುಕಿಲ್ಲದೇ ಪರಿಸ್ಥಿತಿ ನಿಭಾಯಿಸಿದರೆ ನಾಯಿಗಳು ಸುಮ್ಮನಾಗುತ್ತವೆ’ ಎಂದು ಚಾಮರಾಜಪೇಟೆಯಲ್ಲಿರುವ ಕ್ಯೂಪಾದ ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸಾ ಕೇಂದ್ರದ ಎನ್‌. ಲೋಕೇಶ್‌.

ಬೀದಿನಾಯಿಗಳ ಮೇಲಿನ ಭಯದಿಂದಾಗಿಯೇ ಅವುಗಳ ಮೇಲೆ ದ್ವೇಷ ಕಾರುವವರಿಗೆ ಕಿವಿಮಾತು ಹೇಳಿದ ಲೋಕೇಶ್‌, ’ಪ್ರೀತಿಯಿಂದ ಬೀದಿನಾಯಿಗಳ ಮನಸ್ಸನ್ನು ಗೆಲ್ಲಬೇಕೇ ಹೊರತು, ಅವುಗಳ ಮೇಲೆ ಸಿಟ್ಟು ತೋರಿಸುವುದಲ್ಲ. ನಾವು ಎಷ್ಟು ಪ್ರೀತಿ ತೋರಿಸುತ್ತೇವೆಯೋ ಅದರ ಹಲವಾರು ಪಟ್ಟು ಪ್ರೀತಿಯನ್ನು ಅವು ಮರಳಿಸುತ್ತವೆ. ನೀವು ಸ್ವಲ್ಪ ಪ್ರೀತಿ ತೋರಿಸುತ್ತೀರೆಂದು ತಿಳಿದರೂ ಸಾಕು ಅವು ಬೊಗಳುತ್ತಾ ಮೇಲೆರಗುವ ಬದಲು ಬಾಲ ಅಲ್ಲಾಡಿಸುತ್ತಾ ನಿಮಗೆ ಹತ್ತಿರವಾಗುತ್ತವೆ’ ಎಂದು ವಿವರಿಸಿದರು.

ADVERTISEMENT

‘ಬೀದಿನಾಯಿಗಳ ವರ್ತನೆಗಳಿಗೂ ಕಾರಣಗಳಿವೆ. ಚಲಿಸುವ ದ್ವಿಚಕ್ರ ವಾಹನ ಅಥವಾ ಇತರ ವಾಹನಗಳನ್ನು ನಾಯಿಗಳು ಬೆನ್ನಟ್ಟುತ್ತವೆ ಎಂದಾದರೆ, ವಾಹನಗಳಿಂದ ಅವುಗಳಿಗೆ ಅಥವಾ ಅವುಗಳ ಗುಂಪಿನ ಯಾವುದೋ ಒಂದು ನಾಯಿಗೆ ಹಾನಿ ಆಗಿದೆ ಎಂದರ್ಥ. ದ್ವಿಚಕ್ರ ವಾಹನದಲ್ಲಿ ಸಾಗುವಾಗ ನಾಯಿ ಬೆನ್ನಟ್ಟಿದರೆ ಸವಾರರು ವಾಹನದ ವೇಗವನ್ನು ಕಡಿಮೆ ಮಾಡಬೇಕು. ಸಾಧ್ಯವಾದರೆ ಒಂದೆರಡು ನಿಮಿಷ ವಾಹನವನ್ನು ನಿಲ್ಲಿಸಿದರೆ ಇನ್ನೂ ಒಳ್ಳೆಯದು. ಇಂತಹ ಸಂದರ್ಭದಲ್ಲಿ ವಾಹನವನ್ನು ವೇಗವಾಗಿ ಓಡಿಸಿದರೆ, ಬೇಟೆಯೇ ಹುಟ್ಟುಗುಣವಾಗಿರುವ ನಾಯಿಗಳು ಮತ್ತಷ್ಟು ಉತ್ತೇಜನಗೊಂಡು ಅಟ್ಟಿಸಿಕೊಂಡು ಬರುವ ಸಾಧ್ಯತೆ ಹೆಚ್ಚು’ ಎಂದು ಅವರು ಎಚ್ಚರಿಸಿದರು.

‘ಕಲ್ಲು ಹೊಡೆಯದಿರಿ– ಗಕ್ಕನೆ ನಿಲ್ಲಿರಿ’

‘ನಾಯಿಗಳು ಬೊಗಳುತ್ತಾ ಹತ್ತಿರ ಬಂದಾಗ ಅವುಗಳತ್ತ ಕಲ್ಲು ಹೊಡೆಯುವುದು ಅಥವಾ ಕೋಲು ಮತ್ತಿತರ ಆಯುಧದಿಂದ ಅವುಗಳಿಗೆ ಹಲ್ಲೆ ಮಾಡುವುದು ಸರಿಯಲ್ಲ. ಇದರಿಂದ ಅವುಗಳ ಮನಸ್ಸು ಮತ್ತಷ್ಟು ಘಾಸಿಗೊಳಗಾಗುತ್ತದೆ. ಅವು ಮನುಷ್ಯರೆಲ್ಲರನ್ನೂ ದ್ವೇಷಿಸುವ ಅಪಾಯವಿದೆ. ಇಂತಹ ಸಂದರ್ಭದಲ್ಲಿ ಗಕ್ಕನೆ ನಿಂತುಬಿಡಬೇಕು. ಆಗ ಅವುಗಳೂ ವಿಚಲಿತಗೊಂಡು ನಿಲ್ಲುತ್ತವೆ. ಜನರಿಗೆ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಕಡಿಮೆಯಾಗುತ್ತದೆ’ ಎಂದು ಕ್ಯೂಪಾದ ಅಜಯ್‌ ವಿವರಿಸಿದರು.

‘ಬೀದಿ ನಾಯಿಗಳಿಗೆ ಆಹಾರ ನೀಡಿ, ಅವುಗಳನ್ನು ಮಾತನಾಡಿಸುತ್ತಾ ಮುದ್ದು ಮಾಡಿದರೆ ಅವುಗಳಿಗೂ ಜನರ ಮೇಲೆ ನಂಬಿಕೆ ಹುಟ್ಟುತ್ತದೆ. ಬೀದಿನಾಯಿಗಳ ಮನಸ್ಸನ್ನು ಗೆಲ್ಲಲು ಇದು ಉತ್ತಮ ಮಾರ್ಗ’ ಎಂದರು.

‘ಮರಿ ಹಾಕಿರುವ ನಾಯಿಯತ್ತ ಸುಳಿಯದಿರಿ’

‘ಕೆಲವೊಮ್ಮೆ ನಾಯಿಗಳು ಪರಿಚಿತರತ್ತಲೂ ಬೊಗಳುವುದುಂಟು. ಹೆಣ್ಣು ನಾಯಿ ಮರಿ ಹಾಕಿದ ಸಂದರ್ಭದಲ್ಲಿ ತಮ್ಮ ಮರಿಗಳನ್ನು ಕಾಪಾಡುವ ಉದ್ದೇಶದಿಂದ ಉಗ್ರ ವರ್ತನೆ ತೋರುತ್ತದೆ. ಮರಿಗಳಿಗೆ ಹಾಲುಣಿಸುವ ನಾಯಿಗಳಿಂದ ಅಂತರ ಕಾಪಾಡುವುದು ಒಳ್ಳೆಯದು. ಪರಿಚಯವಿರುವವರೂ ಮರಿಗಳ ಹತ್ತಿರ ಬರುವುದನ್ನು ಇವು ಸಹಿಸುವುದಿಲ್ಲ’ ಎನ್ನುತ್ತಾರೆ ಲೋಕೇಶ್‌.

‘ಹೆಣ್ಣು ನಾಯಿ ಬೆದೆಗೆ ಬಂದಾಗ ಆ ಪರಿಸರದ ಗಂಡುನಾಯಿಗಳಲ್ಲಿ ಉಗ್ರ ಸ್ವಭಾವ ಹೆಚ್ಚುತ್ತದೆ. ತಮ್ಮ ಲೈಂಗಿಕ ಅಸಂತೃಪ್ತಿಯಿಂದಾಗಿ ಅವು ಕೆಲವೊಮ್ಮೆ ಬೊಗಳುತ್ತಾ ಬೇರೆಯವರ ಮೇಲೆ ದಾಳಿ ನಡೆಸುವುದುಂಟು’ ಎಂದರು.

ಪ್ರಜಾವಾಣಿ– ಕ್ಯೂಪಾ ಅಭಿಯಾನಕ್ಕೆ ಕೈಜೋಡಿಸಿ

ಬೀದಿಪ್ರಾಣಿಗಳನ್ನು ದ್ವೇಷಿಸುವವರ ದೃಷ್ಟಿಕೋನ ಬದಲಾಯಿಸಲು ಹಾಗೂ ಅವುಗಳ ಬಗ್ಗೆ ಕಾಳಜಿ ವಹಿಸುವ ಜನರು ಮತ್ತು ಸಂಸ್ಥೆಗಳ ಜೊತೆ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ‘ಪ್ರಜಾವಾಣಿ’ಯು ಕ್ಯೂಪಾ ಸಂಸ್ಥೆ ಜೊತೆ ಸೇರಿ ಅಭಿಯಾನ ಆರಂಭಿಸಿದೆ.

ಮೂಕ ಪ್ರಾಣಿಗಳ ಬದುಕಿನಲ್ಲೂ ಭರವಸೆ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ತಾವೂ ಕೈಜೋಡಿಸಬಹುದು. ಸ್ವಯಂಸೇವಕರಾಗುವ ಮೂಲಕ ಬೀದಿ ಪ್ರಾಣಿಗಳ ರಕ್ಷಿಸಲು, ಆರೈಕೆ ಮಾಡಲು ಹಾಗೂ ಅವುಗಳ ಮೇಲಾಗುವ ದೌರ್ಜನ್ಯ ತಪ್ಪಿಸಲು ನೆರವಾಗಬಹುದು. ಬೀದಿಪಾಲಾದ ಪ್ರಾಣಿಗಳನ್ನು ದತ್ತು ಪಡೆದು ಸಾಕಬಹುದು. ಬೀದಿ ಪ್ರಾಣಿಗಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ನೆರವಾಗುವ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಿರಾದರೆ, ಇಲ್ಲಿರುವ ಕೊಂಡಿಯನ್ನು (bit.ly/PVCUPA) ಕ್ಲಿಕ್ಕಿಸಿ ನೋಂದಾಯಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.