ADVERTISEMENT

ಬಾಲಕನ ಗಂಟಲಿಗೇ ಬಾಯಿ ಹಾಕಿದ ಬೀದಿನಾಯಿಗಳು

* ಶಾಲೆಯಿಂದ ಮನೆಗೆ ಮರಳುವಾಗ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 19:57 IST
Last Updated 30 ಆಗಸ್ಟ್ 2018, 19:57 IST
ಪ್ರವೀಣ್‌
ಪ್ರವೀಣ್‌   

ಬೆಂಗಳೂರು: ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕನ ಮೇಲೆ ಭಯಾನಕ ದಾಳಿ ನಡೆಸಿದ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು, ಆತನ ಗಂಟಲಿಗೇ ಬಾಯಿ ಹಾಕಿ ಗಂಭೀರವಾಗಿ ಗಾಯಗೊಳಿಸಿವೆ.

ಎಚ್‌ಎಎಲ್‌ ಸಮೀಪದ ವಿಭೂತಿಪುರದಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆಗೆ ಈ ದುರ್ಘಟನೆ ಸಂಭವಿಸಿದ್ದು, ಬಾಲಕ ಪ್ರವೀಣ್ (11) ಮಣಿಪಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.

‘ತಲೆ, ಕತ್ತು, ಎದೆ, ತೋಳು ಹಾಗೂ ಕಾಲಿನ ಮೇಲೆ ತೀವ್ರ ಸ್ವರೂಪದ ಗಾಯಗಳಾಗಿವೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕತ್ತಿನ ಭಾಗದಲ್ಲಿ ಆಳವಾದ ಗಾಯವಾಗಿರುವುದರಿಂದ ಬಾಲಕ ಉಸಿರಾಟದ ಸಮಸ್ಯೆಯನ್ನೂ ಎದುರಿಸುತ್ತಿದ್ದಾನೆ’ ಎಂದು ವೈದ್ಯರು ತಿಳಿಸಿದರು.

ADVERTISEMENT

‘ಮೊದಲು ಆ ರಸ್ತೆಯಲ್ಲಿ ಬೀದಿ ನಾಯಿಗಳ ಕಾಟ ಕಡಿಮೆ ಇತ್ತು. ಈಗ ಎಲ್ಲಿಂದ ಬಂದವೋ ಗೊತ್ತಿಲ್ಲ. ನಾನು ಹಾಗೂ ನನ್ನ ಪತಿ ಮಣಿಪಾಲ ಆಸ್ಪತ್ರೆಯಲ್ಲಿಯೇ ಸ್ವಚ್ಛತಾ ಕೆಲಸ ಮಾಡುತ್ತೇವೆ. ಮಗನಿಗೆ ಒದಗಿದ ಸ್ಥಿತಿಯಿಂದ ನಮ್ಮ ಕುಟುಂಬವೇ ಈಗ ಕಂಗಾಲಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

ಮುರುಗಮ್ಮ ಅವರಿಗೆ ಪ್ರವೀಣ್‌ ಅಲ್ಲದೆ ಮತ್ತೊಬ್ಬ ಪುತ್ರನಿದ್ದಾನೆ. ಆತ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ.

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪ್ರಕರಣ

ಘಟನೆ ಸಂಬಂಧ ಬಾಲಕನ ತಾಯಿ ದೂರು ಕೊಟ್ಟಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಎಚ್‌ಎಎಲ್‌ ಪೊಲೀಸರು ಮಾಹಿತಿ ನೀಡಿದರು.

ಇನ್‌ಸ್ಪೆಕ್ಟರ್‌ ನೆರವು: ಎಚ್‌ಎಎಲ್‌ ಠಾಣೆಯ ಇನ್‌ಸ್ಪೆಕ್ಟರ್‌ ಮೆಹಬೂಬ್‌ ಪಾಷ ಅವರು ₹ 5 ಸಾವಿರವನ್ನು ಬಾಲಕನ ಪೋಷಕರಿಗೆ ನೀಡುವ ಮೂಲಕ ಮಾನವೀಯತೆ ಮೆರೆದರು.

ಮೇಯರ್ ಭರವಸೆ: ಮೇಯರ್ ಆರ್.ಸಂಪತ್ ರಾಜ್ ಅವರು ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಆಸ್ಪತ್ರೆಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹೇಳಿದರು. ವಿಭೂತಿಪುರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿರುವುದು ನನ್ನ ಗಮನಕ್ಕೂ ಬಂದಿದೆ. ಇದನ್ನು ಸರಿಪಡಿಸಲು ಈಗಾಗಲೇ ಅಧಿಕಾರಿಗಳೊಡನೆ ಸಭೆ ನಡೆಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.