ADVERTISEMENT

ಬೆಳಗದ ಬೀದಿ ದೀಪ: ಗುತ್ತಿಗೆದಾರರಿಗೆ ದಂಡ

ಯಲಹಂಕ ವಲಯದಲ್ಲಿ ಮೇಯರ್‌ ದಿಢೀರ್‌ ತಪಾಸಣೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 19:32 IST
Last Updated 9 ಅಕ್ಟೋಬರ್ 2018, 19:32 IST
ಯಲಹಂಕ ವಲಯದ ಪಾಲಿಕೆ ನಿಯಂತ್ರಣ ಕೊಠಡಿಗೆ ಮಂಗಳವಾರ ದಿಢೀರ್‌ ಭೇಟಿ ನೀಡಿದ ಗಂಗಾಂಬಿಕೆ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಪಾಲಿಕೆಯಲ್ಲಿ ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾ ನಾರಾಯಣ್‌ ಹಾಗೂ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್‌ ಇದ್ದಾರೆ
ಯಲಹಂಕ ವಲಯದ ಪಾಲಿಕೆ ನಿಯಂತ್ರಣ ಕೊಠಡಿಗೆ ಮಂಗಳವಾರ ದಿಢೀರ್‌ ಭೇಟಿ ನೀಡಿದ ಗಂಗಾಂಬಿಕೆ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಪಾಲಿಕೆಯಲ್ಲಿ ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾ ನಾರಾಯಣ್‌ ಹಾಗೂ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್‌ ಇದ್ದಾರೆ   

ಬೆಂಗಳೂರು: ನಗರದ ಯಲಹಂಕ ವಲಯದಲ್ಲಿ ಕೆಲವೆಡೆ ಬೀದಿದೀಪಗಳು ಬೆಳಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮೇಯರ್‌ ಗಂಗಾಂಬಿಕೆ, ಅವುಗಳ ನಿರ್ವಹಣೆಯ ಗುತ್ತಿಗೆದಾರರಿಗೆ ದಂಡ ವಿಧಿಸಿದರು.

ಸಾರ್ವಜನಿಕರ ಕುಂದುಕೊರತೆ ಆಲಿಸುವ ಸಲುವಾಗಿ ಮೇಯರ್‌ ಅವರು ಯಲಹಂಕ ವಲಯದ ನಿಯಂತ್ರಣ ಕೊಠಡಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವಿದ್ಯುತ್‌ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ಅನೇಕರು ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು.

ಈ ದೂರುಗಳ ಸತ್ಯಾಸತ್ಯತೆ ಪರಿಶೀಲಿಸಲು ಸಂಜಯನಗರ ಹಾಗೂ ಗಂಗಾನಗರ ಪ್ರದೇಶಗಳಲ್ಲಿ ಮೇಯರ್‌ ತಪಾಸಣೆ ನಡೆಸಿದಾಗ ಬಹುತೇಕ ದೀಪಗಳು ಉರಿಯುತ್ತಿರಲಿಲ್ಲ. ಇವುಗಳ ನಿರ್ವಹಣೆಯ ಗುತ್ತಿಗೆದಾರರಾದ ರಮಾಮಣಿ ಅವರಿಗೆ ₹ 25 ಸಾವಿರ ದಂಡವನ್ನು ವಿಧಿಸುವಂತೆ ಕಾರ್ಯಪಾಲಕ ಎಂಜಿನಿಯರ್‌ ಆನಂದ್ ಅವರಿಗೆ ಸೂಚಿಸಿದರು.

ADVERTISEMENT

ಹೆಬ್ಬಾಳ ಪಶು ವೈದ್ಯಕೀಯ ಕಾಲೇಜಿನಿಂದ ಮುಂದಕ್ಕೆ ಸುಮಾರು 2 ಕಿ.ಮೀವರೆಗೆ ರಸ್ತೆ ದೀಪಗಳೂ ಉರಿಯುತ್ತಿರಲಿಲ್ಲ. ಇವುಗಳ ನಿರ್ವಹಣೆಯ ಗುತ್ತಿಗೆ ವಹಿಸಿಕೊಂಡಿರುವ ಇಬ್ರಾಹಿಂ ಅವರಿಗೆ ₹ 25 ಸಾವಿರ ದಂಡ ವಿಧಿಸಿದರು.

ಬೀದಿದೀಪ ನಿರ್ವಹಣೆಯನ್ನು ಸರಿಯಾಗಿ ನಿಭಾಯಿಸದ ಎಂಜಿನಿಯರ್‌ಗಳಿಗೂ ನೋಟಿಸ್ ನೀಡಿ ಕ್ರಮ ತೆಗೆದು ಕೊಳ್ಳುವಂತೆ ಮೇಯರ್‌ ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.

ಈ ವಲಯದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೇಯರ್‌ ಅವರು ಪಾಲಿಕೆಯ ವಿಶೇಷ ಆಯುಕ್ತರು, ಯೋಜನೆ, ರಸ್ತೆ ಮೂಲಸೌಕರ್ಯ ಮತ್ತು ಕೆರೆ ವಿಭಾಗಗಳ ಮುಖ್ಯ ಎಂಜಿನಿಯರ್‌ಗಳ ಜೊತೆ ಸಭೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.