ADVERTISEMENT

ಸಂವಿಧಾನದ ನೆಲೆಯಲ್ಲೇ ಹೋರಾಟ ಕಟ್ಟಬೇಕಿದೆ: ಪ್ರೊ. ಜಾನಕಿ ನಾಯರ್‌

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 20:10 IST
Last Updated 9 ಜನವರಿ 2023, 20:10 IST
ಪ್ರೊ.ಜಾನಕಿ ನಾಯರ್
ಪ್ರೊ.ಜಾನಕಿ ನಾಯರ್   

ಬೆಂಗಳೂರು: ‘ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಮೇಲಿನ ಹೇರಿಕೆಗಳನ್ನು ತಡೆಯಲು ಸಂವಿಧಾನದ ತಳಹದಿಯಲ್ಲಿ ಹೋರಾಟಗಳನ್ನು ಕಟ್ಟಬೇಕಿದೆ’ ಎಂದು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಜಾನಕಿ ನಾಯರ್‌ ಹೇಳಿದರು.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ದಶಮಾನೋತ್ಸವದ ಅಂಗವಾಗಿ ನಗರದ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಭವನದಲ್ಲಿ ‘ಸಂವಿಧಾನವೇ ಉಸಿರು– ಬಹುತ್ವವೇ ಬದುಕು’ ಘೋಷವಾಕ್ಯದಡಿ ಭಾನುವಾರ ನಡೆದ ‘ಒಗ್ಗೂಡುವ ಹಬ್ಬ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ಸಂವಿಧಾನವು ಭಾರತದ ಮಹಿಳಾ ಚಳವಳಿಗೆ ಹೆಚ್ಚಿನ ಬಲ ನೀಡಿದೆ. ನಮ್ಮ ಏಕತೆಯು ವೈವಿಧ್ಯ ಮತ್ತು ಭಿನ್ನತೆ ಯೊಳಗೆ ಇದೆ. ಅದನ್ನು ಮಹಿಳಾ ಚಳವಳಿಗಳು ಎತ್ತಿ ಹಿಡಿಯುತ್ತಲೇ ಬಂದಿವೆ. ಮಹಿಳೆ ಯರ ರಕ್ಷಣೆಗೆ ಬಲಿಷ್ಠ ಕಾನೂನು ಇದೆ. ಆದರೆ ಅವುಗಳಿಂದ ನ್ಯಾಯ ಸಿಗುವುದು ಅಸಾಧ್ಯವಾದಂತಹ ಕಠಿಣ ಸಾಮಾಜಿಕ ಪರಿಸ್ಥಿತಿ ಇದೆ’ ಎಂದು ಹೇಳಿದರು.

ADVERTISEMENT

‘ಮಹಿಳೆಯರ ರಕ್ಷಣೆಗೆ ಸಂಪ್ರದಾಯಗಳು ಸಾಕು, ಸಂವಿಧಾನದ ಅಗತ್ಯವಿಲ್ಲ ಎಂಬ ವಾದ ಚಾಲ್ತಿಗೆ ಬಂದಿದೆ. ಈ ರೀತಿಯ ದಾಳಿಗಳನ್ನು ಎದುರಿಸಲು ಸಂವಿಧಾನ ಮತ್ತು ಬಹುತ್ವವನ್ನೇ ಆಧಾರವಾಗಿಟ್ಟುಕೊಂಡು ಹೋರಾಟ ರೂಪಿಸಬೇಕು. ಆ ದಿಸೆಯಲ್ಲಿ ಮಹಿಳೆಯರು ಹೆಚ್ಚು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ದಲಿತ ಮಹಿಳಾ ಒಕ್ಕೂಟದ ಸಂಸ್ಥಾಪಕಿ ರುತ್‌ ಮನೋರಮಾ ಮಾತನಾಡಿ, ‘ರಾಜಿರಹಿತವಾದ ಸಾಮೂಹಿಕ ಹೋರಾಟಗಳ ಅಗತ್ಯ ವಿದೆ. ಯಾವುದೇ ಶ್ರೇಣೀಕರಣ ಇಲ್ಲದ ಪ್ರಜಾತಾಂತ್ರಿಕ ಚಳವಳಿ ಕಟ್ಟುವಲ್ಲಿ ಒಕ್ಕೂಟ ಯಶಸ್ವಿಯಾಗಿದೆ’ ಎಂದರು.

ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಮಹಿಳಾ ಹೋರಾಟ ರೂಪಿಸುವಲ್ಲಿ ಮಹತ್ತರ ಕೆಲಸ ಮಾಡಿರುವ ಹತ್ತು ಹಿರಿಯ ಹೋರಾಟಗಾರ್ತಿಯರನ್ನು ಗೌರವಿಸಲಾಯಿತು.

ನಂತರ ನಡೆದ ಕಾರ್ಯಕ್ರಮದಲ್ಲಿ ‘ಆಚರಣೆಯಲ್ಲಿ ಸ್ತ್ರೀವಾದ’ ಗೋಷ್ಠಿಯಲ್ಲಿ ‘ನ್ಯಾಯಾಂಗ ವ್ಯವಸ್ಥೆಯಲ್ಲಿ ಸ್ತ್ರೀವಾದ’ ಕುರಿತು ಪುಣೆಯ ಡಾ. ಶಶಿಕಲಾ ಗುರುಪುರ, ‘ರಾಜಕಾರಣದಲ್ಲಿ ಸ್ತ್ರೀವಾದ’ ಕುರಿತು ಡಾ.ಎನ್‌. ಗಾಯತ್ರಿ ಮತ್ತು ‘ಕುಟುಂಬ ದಲ್ಲಿ ಸ್ತ್ರೀವಾದ’ ಕುರಿತು ಲೇಖಕಿ ಡಾ.ಸಬಿತಾ ಬನ್ನಾಡಿ ಮಾತನಾಡಿದರು.

ಎರಡನೇ ಗೋಷ್ಠಿಯಲ್ಲಿ ಹೋರಾಟಗಾರ್ತಿಯವರ ಅನುಭವ ಕಥನಗಳನ್ನು ಹಂಚಿಕೊಳ್ಳಲಾಯಿತು.

ಸಂಜೆ ಕೃತಿ ಪುರಪ್ಪೆಮನೆ ಅವರ ನಿರ್ದೇಶನದಲ್ಲಿ ‘ಪದ್ಮಾವತಿ ಕಾಳಗ’ ಎಂಬ ಸ್ತ್ರೀವಾದಿ ದೃಷ್ಟಿಕೋನದ ತಾಳಮದ್ದಲೆಯನ್ನು ಪ್ರಸ್ತುತ ಪಡಿಸಲಾಯಿತು.

*
ಜನಸಂಖ್ಯೆಯಲ್ಲಿ ಅರ್ಧ ದಷ್ಟಿರುವ ಮಹಿಳೆಯರು ಒಂದು ವರ್ಗವಾಗಿ, ಶಕ್ತಿಯಾಗಿ ಒಗ್ಗೂ ಡಲು ಇರುವ ಅಡ್ಡಿಗಳನ್ನು ಮೀರುವ ದಾರಿಯ ಹುಡುಕಾಟ ಇಂದಿನ ಅಗತ್ಯ
-ಸಬಿಹಾ ಭೂಮಿಗೌಡ, ಲೇಖಕಿ

*
ಹೆಣ್ಣು ತನ್ನ ‍ಪ್ರಜ್ಞೆಯನ್ನು ರೂಪಿಸಿಕೊಳ್ಳಲಾಗದಂತೆ ಎಲ್ಲ ಘಟಕಗಳನ್ನು ಕಟ್ಟಲಾಗಿದೆ. ಈ ಕಾರಣಕ್ಕಾಗಿ ನಾವು, ನಮ್ಮ ಒಳಗಿನ ಶತ್ರುವನ್ನು ಕಂಡುಕೊಳ್ಳಬೇಕಿದೆ.
-ಸಬಿತಾ ಬನ್ನಾಡಿ, ಲೇಖಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.