ADVERTISEMENT

ಬಾಡಿಗೆ ಮನೆ ನೋಡಲು ಹೋಗಿದ್ದ ವಿದ್ಯಾರ್ಥಿಗಳನ್ನು ಕೂಡಿಹಾಕಿ ಥಳಿತ, ಸುಲಿಗೆ

ಹಳೇ ವೈಷಮ್ಯದಿಂದ ಕೃತ್ಯ: ಸಹಪಾಠಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 15:51 IST
Last Updated 24 ಏಪ್ರಿಲ್ 2024, 15:51 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಬಾಡಿಗೆ ಮನೆ ನೋಡಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿ ₹90 ಸಾವಿರ ಸುಲಿಗೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಏಳು ಆರೋಪಿಗಳನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.

‘ಯಲಹಂಕ ನ್ಯೂ ಟೌನ್‌ ಅನಂತಪುರದ ವಿವೇಕ್ (20), ಅನಾಮಿತ್ರ (20), ಯುವರಾಜ್ ರಾಥೋಡ್ (20), ಹರಿ ಮುಖರ್ಜಿ (20), ಪ್ರಜಿತ್ ಚತುರ್ವೇದಿ (20), ಅಲೆನ್ ಹಾಗೂ ಕರಣ್ ಬಂಧಿತರು. ಇವರೆಲ್ಲರೂ ಸೇರಿಕೊಂಡು ಕೃಷ್ಣ ಬಾಜಪೇಯಿ ಮತ್ತು ಯುವರಾಜ್ ಸಿಂಗ್ ಎಂಬುವವರನ್ನು ಕೂಡಿಹಾಕಿ ಥಳಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಏಪ್ರಿಲ್ 18ರಂದು ನಡೆದಿದ್ದ ಕೃತ್ಯದ ಬಗ್ಗೆ ಕೃಷ್ಣ ಬಾಜಪೇಯಿ ಹಾಗೂ ಯುವರಾಜ್ ಸಿಂಗ್ ಅವರು ದೂರು ನೀಡಿದ್ದರು. ತನಿಖೆ ಕೈಗೊಂಡು ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು, ದೂರುದಾರರ ಕಾಲೇಜು ಸಹಪಾಠಿಗಳೆಂಬುದು ಗೊತ್ತಾಗಿದೆ’ ಎಂದು ತಿಳಿಸಿದರು.

ADVERTISEMENT

ಕಾಲೇಜಿನಲ್ಲಿ ಗಲಾಟೆ, ವೈಷಮ್ಯದಿಂದ ಕೃತ್ಯ: ‘ದೂರುದಾರರು ಹಾಗೂ ಆರೋಪಿಗಳು, ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾರೆ. ಇವರ ನಡುವೆ ಇತ್ತೀಚೆಗೆ ಗಲಾಟೆ ಆಗಿತ್ತು. ಇದರಿಂದಾಗಿ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು’ ಎಂದು ಪೊಲೀಸರು ಹೇಳಿದರು.

‘ಕೃಷ್ಣ ಹಾಗೂ ಯುವರಾಜ್, ಅನಂತಪುರ ಬಳಿಯ ಕಟ್ಟಡವೊಂದರಲ್ಲಿ ಬಾಡಿಗೆ ಮನೆ ನೋಡಲು ಹೋಗಿದ್ದರು. ಅದೇ ಕಟ್ಟಡದ ಇನ್ನೊಂದು ಮನೆಯಲ್ಲಿ ಆರೋಪಿಗಳು ನೆಲೆಸಿದ್ದರು. ದೂರುದಾರರನ್ನು ನೋಡಿದ್ದ ಆರೋಪಿಗಳು, ಜಗಳ ತೆಗೆದಿದ್ದರು. ಕೃಷ್ಣ ಹಾಗೂ ಯುವರಾಜ್‌ ಅವರನ್ನು ತಮ್ಮ ಮನೆಯ ಕೊಠಡಿಗೆ ಎಳೆದೊಯ್ದಿದ್ದರು. ಇಬ್ಬರ ಮೇಲೂ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದರು. ಸಿಗರೇಟ್‌ನಿಂದ ದೇಹದ ಹಲವೆಡೆ ಸುಟ್ಟಿದ್ದರು’ ಎಂದು ತಿಳಿಸಿದರು.

‘ಬಾಡಿಗೆ ಮನೆಗೆ ಮುಂಗಡವಾಗಿ ನೀಡಲೆಂದು ದೂರುದಾರರು ₹ 40 ಸಾವಿರ ತಂದಿದ್ದರು. ಅದನ್ನು ಆರೋಪಿಗಳು ಕಸಿದುಕೊಂಡಿದ್ದರು. ಜೊತೆಗೆ, ಜೀವ ಬೆದರಿಕೆಯೊಡ್ಡಿ ಆನ್‌ಲೈನ್ ಮೂಲಕವೂ ₹ 50 ಸಾವಿರ ವರ್ಗಾಯಿಸಿಕೊಂಡಿದ್ದರು.’

‘ಮಾದಕ ವಸ್ತು ಎಂಬುದಾಗಿ ಹೇಳಿ ಪೊಟ್ಟಣವೊಂದನ್ನು ದೂರುದಾರರ ಕೈಗೆ ಕೊಟ್ಟಿದ್ದ ಆರೋಪಿಗಳು, ಅದರ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು. ‘ನೀವು ಡ್ರಗ್ಸ್ ಮಾರಾಟಗಾರರು ಎಂಬುದಾಗಿ ಹೇಳಿ ಪೊಲೀಸರಿಗೆ ವಿಡಿಯೊ ಕಳುಹಿಸುತ್ತೇವೆ’ ಎಂದು ಆರೋಪಿಗಳು ಬೆದರಿಸಿದ್ದರು. ₹ 4 ಲಕ್ಷ ಹಣಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ, ಹಲ್ಲೆ ಹಾಗೂ ಸುಲಿಗೆ ಸಂಗತಿ ಯಾರಿಗೂ ಹೇಳದಂತೆ ಬೆದರಿಸಿ ಬಿಟ್ಟು ಕಳುಹಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಘಟನೆ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದ ಕೃಷ್ಣ ಹಾಗೂ ಯುವರಾಜ್, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರವೇ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.