
ಬೆಂಗಳೂರು: ‘ಕೈಗಾರಿಕೆಗಳ ನಿರೀಕ್ಷೆಗೆ ವಿದ್ಯಾರ್ಥಿಗಳು ತಕ್ಕಂತೆ ಸಿದ್ಧಗೊಳ್ಳುವುದರ ಜತೆಗೆ ನವ ಭಾರತ ನಿರ್ಮಾಣಕ್ಕೆ ಶಕ್ತಿಯಾಗಿ ನಿಲ್ಲಬೇಕು’ ಎಂದು ಕ್ವಾಲ್ಕಾಮ್ ಇಂಡಿಯಾದ ಎಂಜಿನಿಯರ್ ಡಾ.ಆರ್.ಕೆ. ಶ್ರೀನಿವಾಸ್ ತಿಳಿಸಿದರು.
ಬಿಎನ್ಎಂಐಟಿ ಕಾಲೇಜು, ಐಇಇಇ ಸಹಯೋಗದೊಂದಿಗೆ ‘ಕಂಪ್ಯೂಟಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಬುದ್ಧಿವಂತಿಕೆ ಮತ್ತು ನವೋದ್ಯಮ ತಂತ್ರಜ್ಞಾನ’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
‘ನೀವು ಬರೆಯುವ ಕೋಡ್, ಸೃಷ್ಟಿಸುವ ಪ್ರೋಗ್ರಾಂ, ಮಂಡಿಸುವ ಪ್ರಬಂಧಗಳಿಂದ ಭಾರತವು ಉನ್ನತಿ ಕಾಣಲು ಸಾಧ್ಯವಿದೆ. ನಿಮ್ಮಿಂದ ನವ ಭಾರತದ ಕನಸು ನನಸು ಆಗಲಿದೆ’ ಎಂದರು.
‘ಎಡ್ಜ್ ಎಐ ಬಾಹ್ಯಾಕಾಶದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಎಐ ಎಲ್ಲಿದೆಯೋ, ಅಲ್ಲಿ ಬುದ್ಧಿಮತ್ತೆ ಇರಲಿದೆ. ಸ್ಮಾರ್ಟ್ ಅಪ್ ಮೇಲೆ ಗಮನ ನೀಡಿ. ಕ್ವಾಲ್ಕಾಮ್ ಒಂದೇ 2025ರಲ್ಲಿ ಎರಡು ಸಾವಿರಕ್ಕೂ ಹೆಚ್ಚು ಹಕ್ಕು ಸ್ವಾಮ್ಯತೆಯನ್ನು ಪಡೆದಿದೆ. ಇದು ಎಲ್ಲಾ ಡೊಮೈನ್‌ನಲ್ಲಿಯೂ ಇದೆ. ಇದೇ ರೀತಿ ಹೆಚ್ಚಿನ ಹಕ್ಕು ಸ್ವಾಮ್ಯತೆಯನ್ನು ಪಡೆಯಬೇಕು’ ಎಂದರು.
ಬಿಎನ್ಎಂಐಟಿ ಕಾಲೇಜಿನ ಡೀನ್ ಪ್ರೊ. ಈಶ್ವರ್ ಎನ್.ಮಾನೆ ಮಾತನಾಡಿ, ‘ವಿದ್ಯಾರ್ಥಿಗಳು ಹೊಸ ಆಲೋಚನೆಗಳ ಬಗ್ಗೆ ಯೋಚಿಸಬೇಕು. ವಿದ್ಯಾರ್ಥಿಗಳು ಎಐ ಅನ್ನು ಒಳ್ಳೆಯ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಬೇಕು. ಲಭ್ಯವಿರುವ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಂಶೋಧನೆಯ ಕಡೆ ಹೆಚ್ಚಿನ ಗಮನ ನೀಡಬೇಕು’ ಎಂದರು.
ಹನಿವೆಲ್ ಏರೋಸ್ಪೇಸ್ ಎಲೆಕ್ಟ್ರಾನಿಕ್ ಸೆಲ್ಯೂಸನ್‌ನ ಹಿರಿಯ ನಿರ್ದೇಶಕ ಮೈಥಿಲಿ ಬೆಳ್ಳಿ ಕಾಮತ್, ಕಾಲೇಜಿನ ಹೆಚ್ಚುವರಿ ನಿರ್ದೇಶಕ ಎಸ್.ವೈ. ಕುಲಕರ್ಣಿ, ಉಪ ನಿರ್ದೇಶಕ ಡಾ. ಜಿ. ಎನ್. ಕೃಷ್ಣಮೂರ್ತಿ, ನಿರ್ದೇಶಕರಾದ ಪ್ರೊ. ಟಿ. ಜೆ.ರಾಮಮೂರ್ತಿ ಮತ್ತು ಕೆ. ವೆಂಕಟೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.