
ಬೆಂಗಳೂರು: ಸರ್ಕಾರಿ ರಜೆಗಳ ಸಂಖ್ಯೆ ಕಡಿತಗೊಳಿಸುವ ಕುರಿತು ಪರಿಶೀಲಿಸಲು ರಚನೆಯಾಗಿರುವ ಸಚಿವ ಸಂಪುಟ ಉಪಸಮಿತಿ ಬುಧವಾರ ಮೊದಲ ಸಭೆ ನಡೆಸಿತು. ವಿವಿಧ ವರ್ಗಗಳಿಂದ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅಂತಿಮ ವರದಿ ನೀಡಲು ಸಮಿತಿ ನಿರ್ಧರಿಸಿದೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಉಪಸಮಿತಿ ರಚಿಸಲಾಗಿದೆ.
ಸರ್ಕಾರಿ ನೌಕರರಿಗೆ ವರ್ಷಕ್ಕೆ 100ಕ್ಕೂ ಅಧಿಕ ರಜೆಗಳು ಸಿಗುತ್ತವೆ. 54 ವಾರದ ರಜಾ ದಿನಗಳು, 12 ಎರಡನೇ ಶನಿವಾರ ಹಾಗೂ 21 ಸಾರ್ವತ್ರಿಕ ರಜಾ ದಿನಗಳು ಬರುತ್ತವೆ. 19 ಸಾಂದರ್ಭಿಕ ರಜೆಗಳು ಇವೆ. ರಜಾ ದಿನಗಳ ಸಂಖ್ಯೆ ವಿಪರೀತವಾಗಿದೆ ಎಂಬ ಭಾವನೆ ಇದೆ. ಇದರಿಂದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂಬ ಭಾವನೆಯೂ ಇದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಗೊತ್ತಾಗಿದೆ.
ವರ್ಷಕ್ಕೆ 15 ದಿನ ಇರುವ ಸಾಂದರ್ಭಿಕ ರಜೆಯನ್ನು 8ಕ್ಕೆ ಇಳಿಸಿ, ತಿಂಗಳ ನಾಲ್ಕನೇ ಶನಿವಾರ ರಜೆ ನೀಡಲು ಹಾಗೂ ವಿವಿಧ ಭತ್ಯೆಗಳನ್ನು ಹೆಚ್ಚಿಸಲು ಆರನೇ ವೇತನ ಆಯೋಗ ಶಿಫಾರಸು ಮಾಡಿತ್ತು. ಈ ಬಗ್ಗೆಯೂ ಚರ್ಚೆ ನಡೆಯಿತು.
‘ವಿವಿಧ ಸಮುದಾಯಗಳು, ಸರ್ಕಾರಿ ನೌಕರರ ಸಂಘಟನೆ, ಸಾರ್ವಜನಿಕ ಆಡಳಿತ ಕ್ಷೇತ್ರದ ತಜ್ಞರ ಜತೆಗೆ ಸಮಾಲೋಚನೆ ನಡೆಸಿ ಅಂತಿಮ ವರದಿ ನೀಡಲಾಗುತ್ತದೆ’ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದರು. ಈ ಸಮಿತಿಯ ಶಿಫಾರಸು 2019–20 ವರ್ಷದಿಂದ ಜಾರಿಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.