ADVERTISEMENT

ವಹ್ನಿಕುಲ ಸಮಾಜಕ್ಕೆ ಸುಧಾಕರ್‌ ಅವಮಾನ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 0:06 IST
Last Updated 22 ಏಪ್ರಿಲ್ 2024, 0:06 IST
ಕರ್ನಾಟಕ ರಾಜ್ಯ ತಿಗಳರ (ವಹ್ನಿಕುಲ ಕ್ಷತ್ರಿಯರ) ಸಂಘದ ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಸಿ.ಜಯರಾಜ್‌ ಮಾತನಾಡಿದರು
ಕರ್ನಾಟಕ ರಾಜ್ಯ ತಿಗಳರ (ವಹ್ನಿಕುಲ ಕ್ಷತ್ರಿಯರ) ಸಂಘದ ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಸಿ.ಜಯರಾಜ್‌ ಮಾತನಾಡಿದರು   

ಯಲಹಂಕ: ವಹ್ನಿಕುಲ ಕ್ಷತ್ರಿಯರ (ತಿಗಳ) ಮುಖಂಡ ವಿಜಯಕುಮಾರ್‌ ಮತ್ತು ಸಂಗಡಿಗರು ಬಿಜೆಪಿಗೆ ಸೇರಲು ಮುಂದಾಗಿದ್ದರೂ ಅದಕ್ಕೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್‌ ಅಡ್ಡಗಾಲು ಹಾಕಿ ಅವಮಾನ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ತಿಗಳರ (ವಹ್ನಿಕುಲ ಕ್ಷತ್ರಿಯರ) ಸಂಘದ ಮಾಜಿ ಅಧ್ಯಕ್ಷ ಸಿ.ಜಯರಾಜ್‌ ಆರೋಪಿಸಿದರು.

ಕೋಗಿಲು ಮುಖ್ಯರಸ್ತೆಯ ಮಾರುತಿ ನಗರದಲ್ಲಿ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಹ್ನಿಕುಲ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಸ್ಪರ್ಧಿಸಲು ಹೂಡಿ ವಿಜಯಕುಮಾರ್‌ಗೆ ಟಿಕೆಟ್‌ ನೀಡಬೇಕೆಂದು ಕೇಳಲು ಸಮಾಜದ ಮುಖಂಡರು ಮತ್ತು ಸ್ವಾಮೀಜಿಗಳು ಸುಧಾಕರ್‌ ನಿವಾಸಕ್ಕೆ ಹೋಗಿದ್ದರು. ಆಗ ಅವರನ್ನು ಮನೆಯೊಳಗೆ ಕರೆಯದೇ ಅವಮಾನ ಮಾಡಿದ್ದರು. ಬಿಜೆಪಿ ಟಿಕೆಟ್ ತಪ್ಪುವಂತೆ ಮಾಡಿದ್ದರು. ವಿಜಯಕುಮಾರ್‌ ಪಕ್ಷೇತರನಾಗಿ ಸ್ಪರ್ಧಿಸಿ ಕೆಲವೇ ಮತಗಳಿಂದ ಸೋಲನುಭವಿಸಿದ್ದರು. ಬಳಿಕವೂ ಸಮಾಜ ಸೇವೆಯಲ್ಲಿ ಅವರು ಸಕ್ರಿಯರಾಗಿದ್ದು, ಬಿಜೆಪಿಗೆ ಸೇರಬೇಕು ಎಂಬುದು ನಮ್ಮ ಆಶಯವಾಗಿತ್ತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಲ್ಲಿ ಮಾತನಾಡಿ ಏ.10ರಂದು ಬಿಜೆಪಿ ಸೇರ್ಪಡೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಅದನ್ನು ತಪ್ಪಿಸಿ ವಹ್ನಿಕುಲ ಕ್ಷತ್ರಿಯರನ್ನು ತುಳಿಯುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

ADVERTISEMENT

ಸಂಘದ ರಾಜ್ಯ ಘಟಕದ ಅಧ್ಯಕ್ಷ ಮು. ಕೃಷ್ಣಮೂರ್ತಿ ಮಾತನಾಡಿ, ‘ರಾಜ್ಯದಲ್ಲಿ ನಮ್ಮ ಜನಾಂಗದ 40 ಲಕ್ಷ ಜನರಿದ್ದಾರೆ. ರಾಜಕೀಯವಾಗಿ ಗ್ರಾಮ ಪಂಚಾಯಿತಿ, ನಗರಸಭೆ ಹಾಗೂ ಬಿಬಿಎಂಪಿಗೆ ಮಾತ್ರ ಸೀಮಿತರಾಗಿದ್ದಾರೆ. ಸಮುದಾಯದಿಂದ ಒಬ್ಬರೂ ಶಾಸಕರಾಗಿಲ್ಲ; ಸಮುದಾಯದ ಮುಖಂಡರು ಬೆಳೆಯಲು ಹೊರಟರೆ ತುಳಿಯುವ ಕೆಲಸ ಮಾಡುತ್ತಿರುವುದು ವಿಷಾದನೀಯ’ ಎಂದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್‌ ಅವರಿಗೆ ಮತ ಹಾಕದಿರಲು ಸಭೆಯಲ್ಲಿ ನಿರ್ಣಯ ಕೈಗೊಂಡರು.

ಆದಿಶಕ್ತಿ ದ್ರೌಪತಮ್ಮ ಗುರುಪೀಠದ ಮಂಜುನಾಥ ಸ್ವಾಮೀಜಿ, ಸಂಘದ ಮುಖಂಡರಾದ ಮುನಿತಾಯಪ್ಪ, ನಾಗಾರ್ಜುನ, ಎಂ.ಡಿ. ನಾರಾಯಣಸ್ವಾಮಿ, ಗೋವಿಂದರಾಜು, ಚಿನ್ನಸ್ವಾಮಿಗೌಡ, ಜಗದೀಶ್‌, ಮುದ್ದಣ್ಣ, ವೈ.ಸಿ. ವೆಂಕಟೇಶ್‌, ಟಾಟಾ ರಮೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.