ADVERTISEMENT

ಕೊನೆಗೂ ಕೈಗೂಡಿದ ಸುಧಾಕರ್ ಆಸೆ

ದಿಢೀರ್ ಬೆಳವಣಿಗೆಯಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನು ಬದಲಾಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಈರಪ್ಪ ಹಳಕಟ್ಟಿ
Published 20 ಜೂನ್ 2019, 13:42 IST
Last Updated 20 ಜೂನ್ 2019, 13:42 IST
ಬೆಂಗಳೂರಿನಲ್ಲಿ ಗುರುವಾರ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಶಾಸಕ ಡಾ.ಕೆ.ಸುಧಾಕರ್
ಬೆಂಗಳೂರಿನಲ್ಲಿ ಗುರುವಾರ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಶಾಸಕ ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಶಾಸಕ ಡಾ.ಕೆ.ಸುಧಾಕರ್ ಅವರನ್ನು ರಾಜ್ಯ ಸರ್ಕಾರ ಗುರುವಾರ ದಿಢೀರ್ ಬೆಳವಣಿಗೆಯಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಅತೃಪ್ತರ ಮುನಿಸು ತಣಿಸುವ ಕೆಲಸ ಮುಂದಾಗಿದೆ. ಈ ಮೂಲಕ ಸುಧಾಕರ್‌ ಅವರ ಆಸೆ ಕೊನೆಗೂ ಕೈಗೂಡಿದಂತಾಗಿದೆ.

ಕೆಲ ತಿಂಗಳ ಹಿಂದೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನಗಳಿಗೆ ಕಾಂಗ್ರೆಸ್ ಹೈಕಮಾಂಡ್ ಶಿಫಾರಸು ಮಾಡಿದ್ದ ಪಟ್ಟಿಯಲ್ಲಿನ ಬಹುಪಾಲು ಶಾಸಕರ ನೇಮಕಾತಿಗೆ ಕೆಲ ಹಂತಗಳಲ್ಲಿ ಆದೇಶ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಎಸ್‌ಪಿಸಿಬಿಗೆ ಸುಧಾಕರ್‌ ಅವರನ್ನು ನೇಮಕ ಮಾಡಲು ನಿರಾಕರಿಸಿದ್ದರು. ನಂತರ ಆ ಸ್ಥಾನಕ್ಕೆ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸಿ.ಜಯರಾಂ ಅವರ ನೇಮಕ ಮಾಡಿದ್ದರು.

ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು, ‘ಪ್ರಭಾವಿ’ ಶಾಸಕರಲ್ಲಿ ಒಬ್ಬರಾಗಿದ್ದ ಸುಧಾಕರ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅದು ಸಿಗದೆ ಹೋದಾಗ ಮಂಡಳಿ ಅಧ್ಯಕ್ಷ ಸ್ಥಾನವಾದರೂ ಸಿಕ್ಕಿತಲ್ಲ ಎಂದು ಸಮಾಧಾನ ಪಡಬೇಕಾದ ಹೊತ್ತಿನಲ್ಲಿ ಕುಮಾರಸ್ವಾಮಿ ಅವರ ಈ ನಿರ್ಧಾರ ಸುಧಾಕರ್ ಮತ್ತವರ ಬೆಂಬಲಿಗರನ್ನು ಕೆರಳುವಂತೆ ಮಾಡಿತ್ತು.

ADVERTISEMENT

ಸಮ್ಮಿಶ್ರ ಸರ್ಕಾರದಲ್ಲಿ ಆರಂಭದಿಂದಲೇ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂತಹ ಹೇಳಿಕೆಗಳ ಮೂಲಕ ಅಚ್ಚರಿ ಮೂಡಿಸುತ್ತ ಸುದ್ದಿಯಲ್ಲಿದ್ದ ಸುಧಾಕರ್‌ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಜತೆಗೆ  ‘ನಮ್ಮ ಶಾಸಕರಿಗೆ ಮಂಡಳಿ ಅಧ್ಯಕ್ಷ ಸ್ಥಾನ ನೀಡದಿದ್ದರೆ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಅವರ ಬೆಂಬಲಿಗರು ನಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತೇವೆ’ ಎಂದು ಬೆದರಿಕೆ ಕೂಡ ಒಡ್ಡಿದ್ದರೂ. ಆದರೂ ಕುಮಾರಸ್ವಾಮಿ ಅವರ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.

ಇದರಿಂದ ಆಕ್ರೋಶಗೊಂಡ ಶಾಸಕರು ಮಂಚೇನಹಳ್ಳಿ ಕಾರ್ಯಕ್ರಮದಲ್ಲಿ, ‘ಎರಡು ಬಾರಿ ಜೆಡಿಎಸ್‌ ಅಭ್ಯರ್ಥಿಯನ್ನು ಸೋಲಿಸುವ ಶಕ್ತಿ ಜನ ನನಗೆ ಕೊಟ್ಟಿರುವಾಗ ಇದ್ಯಾವುದು ಪುಟಗೋಸಿ ಚೇರ್ಮನ್‌ ಹುದ್ದೆ. ಅದನ್ನು ನಾನು ಕೇಳಿಯೇ ಇರಲಿಲ್ಲ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.

‘ಕಾಂಗ್ರೆಸ್‌ ಪಕ್ಷ ನನ್ನನ್ನು ಗುರುತಿಸಿದೆ. ನೀವ್ಯಾರು ನನ್ನನ್ನು ಬೆಳೆಸಲು. ನೀವು ನನ್ನನ್ನು ಬೆಳೆಸಿದರೂ ಅಷ್ಟೇ ಬೆಳೆಸದಿದ್ದರೂ ಅಷ್ಟೇ. ನಿಮ್ಮನ್ನು ನಾನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ನಾನು ನನ್ನ ಜನರನ್ನು, ಕಾಂಗ್ರೆಸ್‌ ಪಕ್ಷವನ್ನು ಲೆಕ್ಕಕ್ಕೆ ಇಟ್ಟುಕೊಂಡಿರುವೆ. ನಮ್ಮ ಹೈಮಾಂಡ್‌ ಹೆಚ್ಚು ಬೈಯಬೇಡಿ ಎಂದು ಹೇಳಿದ್ದಾರೆ. ಆದರೆ ಇವರು ಮಾಡುವ ಚೇಷ್ಟೆ ಕಂಡು ಮೈಯೆಲ್ಲ ಉರಿಯುತ್ತದೆ. ಇಂತಹ ಜನರನ್ನು ಈ ದೇಶ ಕಂಡೇ ಇರಲಿಲ್ಲ. ಅದೇನು ಸೊಕ್ಕೋ ಅಪ್ಪಾ!’ ಎಂದಿದ್ದರು.

ಒಂದೆರಡು ಬಾರಿ ಅತೃಪ್ತರ ಜತೆಗೆ ಗುರುತಿಸಿಕೊಂಡು ಬಿಜೆಪಿ ಸೇರಲು ಹೊರಟಿದ್ದರು ಎಂಬ ವದಂತಿಗಳು ಸಹ ಹರಿದಾಡಿದ್ದವು. ಅದಕ್ಕೆ ಪುಷ್ಟಿ ನೀಡುವಂತೆ ಅವರೊಮ್ಮೆ ‘ರಾಜಕಾರಣದಲ್ಲಿ ಏನೂ ಬೇಕಾದರೂ ಆಗಬಹುದು. ಯಾವುದನ್ನು ನಿರಾಕರಿಸಲಾಗುವುದಿಲ್ಲ’ ಎಂದು ಕೂಡ ಹೇಳುವ ಮೂಲಕ ಕಾಂಗ್ರೆಸ್‌ ಮುಖಂಡರು, ಬೆಂಬಲಿಗರಲ್ಲಿ ಕುತೂಹಲ ಹುಟ್ಟಿಸಿದ್ದರು.

ಅವರ ಈ ನಡುವಳಿಕೆ ಮತ್ತು ಕುಮಾರಸ್ವಾಮಿ ಅವರನ್ನೇ ಗುರಿಯಾಗಿರಿಸಿಕೊಂಡು ಅವರು ಪದೇ ಪದೇ ನೀಡಿದ ಇರುಸು ಮುರುಸು ಉಂಟು ಮಾಡುವಂತಹ ಹೇಳಿಕೆಗಳು ಅವರಿಗೆ ಮುಳುವಾದವು ಎಂಬ ವಿಶ್ಲೇಷಣೆಗಳು ಕ್ಷೇತ್ರದಲ್ಲಿ ವ್ಯಕ್ತವಾಗಿದ್ದವು.

ಆದರೂ ತಮ್ಮ ಟೀಕೆಗಳಿಗೆ ವಿರಾಮ ನೀಡದ ಸುಧಾಕರ್ ಅವರು ಇತ್ತೀಚೆಗೆ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದ ವಿಸ್ತರಣೆಯಲ್ಲಿ ಇಬ್ಬರು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡ ಬೆನ್ನಲ್ಲೇ, ‘ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಆ ಅಸ್ಥಿರತೆ ಹೆಚ್ಚಾಗಿದೆ. ರಾಜ್ಯದಲ್ಲಿ ರಾಜಕೀಯ ಸ್ಥಿರತೆ ಇರುವ ಸರ್ಕಾರ ಬರಬೇಕು. ಜನಪರ ಆಲೋಚನೆ ಮಾಡುವ ಸರ್ಕಾರ ಬರಬೇಕು. ಹೀಗಾಗಿ, ನನ್ನ ಮುಂದಿನ ನಡೆಯನ್ನು ಮತದಾರರ ಜತೆ ಸಮಾಲೋಚಿಸಿ ನಿರ್ಧರಿಸುತ್ತೇನೆ’ ಎಂದು ಹೊಸ ಬಾಂಬ್‌ ಹಾಕಿದ್ದರು.

‘ಕಳೆದ ಒಂದು ವರ್ಷದಲ್ಲಿ ನನಗೆ ವೈಯಕ್ತಿಕವಾಗಿ, ರಾಜಕೀಯವಾಗಿ, ಅಭಿವೃದ್ಧಿ ವಿಚಾರದಲ್ಲಿ ಅನೇಕ ಅಪಮಾನಗಳು ಆಗಿವೆ. ಆದರೂ ನನಗೆ ರಾಜ್ಯದ ಜನರ ಅಭಿವೃದ್ಧಿ ಮುಖ್ಯ. ಹೀಗಾಗಿ, ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಾನು ಬಹಳ ಚಿಂತನೆ ಮಾಡುತ್ತಿದ್ದೇನೆ’ ಎಂದಿದ್ದರು. ಅದರ ಬೆನ್ನಲ್ಲೇ ಅವರನ್ನು ಕೆಎಸ್‌ಪಿಸಿಬಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸರ್ಕಾರ ಉಳಿಸಿಕೊಳ್ಳುವ ರಾಜಕೀಯ ತಂತ್ರಗಾರಿಕೆಯ ಭಾಗ ಎಂದು ಸದ್ಯ ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.