ADVERTISEMENT

ಕನ್ನಡದಲ್ಲಿ ಬರೆದರೆ ಆತ್ಮತೃಪ್ತಿ’ : ಸುಧಾಮೂರ್ತಿ

ಲೇಖಕಿ ಸುಧಾಮೂರ್ತಿ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:46 IST
Last Updated 2 ಜೂನ್ 2019, 19:46 IST
ಸುಧಾಮೂರ್ತಿ ಅವರಿಗೆ ಮನು ಬಳಿಗಾರ್‌ ಪ್ರಶಸ್ತಿ ಪ್ರದಾನ ಮಾಡಿದರು. ಟಿ. ಸಿ. ಪೂರ್ಣಿಮಾ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಮತ್ತು ಇತರರು ಇದ್ದಾರೆ -ಪ್ರಜಾವಾಣಿ ಚಿತ್ರ
ಸುಧಾಮೂರ್ತಿ ಅವರಿಗೆ ಮನು ಬಳಿಗಾರ್‌ ಪ್ರಶಸ್ತಿ ಪ್ರದಾನ ಮಾಡಿದರು. ಟಿ. ಸಿ. ಪೂರ್ಣಿಮಾ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಮತ್ತು ಇತರರು ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದುಡ್ಡಿಗೂ ಬರಹಕ್ಕೂ ಸಂಬಂಧವಿಲ್ಲ. ಸಂವೇದನಾಶೀಲ ಅಂತಃಕರಣವಿದ್ದಾಗ ಮಾತ್ರ ಬರವಣಿಗೆ ಸಾಧ್ಯ. ಅದರಲ್ಲಿಯೂ ಕನ್ನಡದಲ್ಲಿ ಬರೆಯುವುದು ಎಂದರೆ ಹೃದಯದ ಭಾಷೆಯಲ್ಲಿ ಬರೆದಂತೆ ಹೆಚ್ಚು ಆಪ್ತವಾಗಿಯೂ, ಮುಕ್ತವಾಗಿಯೂ ಇರುತ್ತದೆ’ ಎಂದುಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.

ಕರ್ನಾಟಕ ಲೇಖಕಿಯರ ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2019ರ ಸಾಲಿನ ಅನುಪಮ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ‍ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ADVERTISEMENT

‘ಇಂಗ್ಲಿಷ್‌ನಲ್ಲಿ ಕೃತಿಗಳನ್ನು ಬರೆದರೆ ಅವು ಬಹುಬೇಗನೇ 13 ಭಾಷೆಗಳಿಗೆ ಅನುವಾದಗೊಳ್ಳುತ್ತವೆ. ಆದರೆ, ಬರವಣಿಗೆ ಎನ್ನುವುದು ಇತರರಿಗಾಗಿ ಮಾಡುವ ಕೆಲಸವಲ್ಲ. ಮನಸ್ಸಿನ ಸಂತೋಷಕ್ಕಾಗಿ ಮಾಡುವ ಬರವಣಿಗೆ. ನನ್ನ ಹೃದಯದ ಭಾಷೆ ಕನ್ನಡದಲ್ಲಿಯೇ ಇರುತ್ತದೆ. ಶಾನಭಾಗರ ಡೆಸ್ಕಿನಲ್ಲಿ ಬಿಳಿ ಹಾಳೆ ಮತ್ತು ಪೆನ್ನು ಕಂಡಾಗ ಯೋಚನೆಗಳು ವಾಯುವೇಗದಲ್ಲಿ ಮನದೊಳಗೆ ನುಗ್ಗಿ ಬರುತ್ತವೆ. ಅವುಗಳನ್ನು ಅಕ್ಷರ ರೂಪಕ್ಕಿಳಿಸುವಲ್ಲಿ ಕೈಗಳು ಸೋಲುತ್ತವೆ. ಅದಕ್ಕಾಗಿಯೇ ನಾನು ಕನ್ನಡ ಶಾರ್ಟ್‌ಹ್ಯಾಂಡ್‌ನಲ್ಲಿ ಮೊದಲು ಬರೆದುಬಿಡುತ್ತೇನೆ’ ಎಂದು ಹೇಳಿಕೊಂಡರು.

‘ಭಾವನೆಗಳನ್ನು ಸರಳವಾಗಿ ಮನಮುಟ್ಟುವಂತೆ ವಿವರಿಸಿದಾಗ ಓದುಗರು ಇಷ್ಟಪಡುತ್ತಾರೆ. ಇತರರ ಕಷ್ಟಗಳಿಗೆ ಸ್ಪಂದಿಸುವ ಸಂವೇದನೆ ಮತ್ತು ಸಮಾಜದಲ್ಲಿ ನಡೆಯುವ ಘಟನೆಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಮನೋಭಾವ ಇದ್ದಾಗ ಲೇಖಕರ ಬರವಣಿಗೆಯಲ್ಲಿಯೂ ಆ ಸತ್ವವು ಸಹಜವಾಗಿಯೇ ಮೂಡಿ ಬರುತ್ತದೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌, ‘ಲೇಖಕರ ಪೈಕಿ ಡಾ.ಎಸ್‌.ಎಲ್‌.ಭೈರಪ್ಪ ಅವರು ಸಾಹಿತ್ಯದ ಮೂಲಕ ಜಗತ್ತನ್ನು ತಲುಪಿದಂತೆ ಕನ್ನಡದ ಲೇಖಕಿಯರ ಪೈಕಿ ಸುಧಾಮೂರ್ತಿಯವರು ಜಗ ತ್ತಿನ ಎಲ್ಲೆಡೆ ಗುರುತಿಸಿಕೊಂಡಿ
ದ್ದಾರೆ. ದೇವದಾಸಿಯರ ಪುನರ್ವಸತಿ, ಬಡರೈತರಿಗೆ ನೆರವು ಸೇರಿದಂತೆ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿ
ಸಿಕೊಂಡ ಅವರು ಸಮಾಜಮುಖಿ ಲೇಖಕಿಯೂ ಹೌದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.