ADVERTISEMENT

ಕೋವಿಡ್‌ನಿಂದ ಉಸಿರುಗಟ್ಟಿಸುವ ವಾತಾವರಣ: ಬಿ.ಎಲ್‌.ಸಂತೋಷ್‌

​ಪ್ರಜಾವಾಣಿ ವಾರ್ತೆ
Published 23 ಮೇ 2021, 20:43 IST
Last Updated 23 ಮೇ 2021, 20:43 IST

ಬೆಂಗಳೂರು: ಕೋವಿಡ್ ಸಂಕಷ್ಟ ಕಾಲದಲ್ಲಿ ದೇಶದೊಂದಿಗೆ ಕೈಜೋಡಿಸಿ ಕೆಲಸ ಮಾಡುವ ಬದಲು ಟೂಲ್ ಕಿಟ್‌ ಮೂಲಕ ಸರ್ಕಾರ ಪ್ರತಿ ನಡೆಯನ್ನೂ ವಿರೋಧಿಸುವ ಕೆಲಸವನ್ನು ಪ್ರತಿಪಕ್ಷ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಕರ್ನಾಟಕ ಪ್ರಜ್ಞಾ ಪ್ರವಾಹ ಏರ್ಪಡಿಸಿದ್ದ ವರ್ಚುವಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

’ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಗಳಿಗೆ ಏಕೆ ಕೊಟ್ಟಿರಿ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಲಸಿಕೆಗೆ ₹32 ಸಾವಿರ ಕೋಟಿ ಮೀಸಲಿಟ್ಟಾಗ, ವಕೀಲ ಪ್ರಶಾಂತ್‌ ಭೂಷಣ್ ಅವರು ಇಷ್ಟು ಹಣ ಲಸಿಕೆಗೆ ಏಕೆ ಇಟ್ಟಿದ್ದೀರಿ? ಲಸಿಕೆಯ ಅಗತ್ಯವಿಲ್ಲ, ಆ ಹಣವನ್ನು ಕಾರ್ಮಿಕರಿಗೆ ಹಂಚಿಬಿಡಿ ಎಂದು ಹೇಳಿದ್ದರು‘.

ADVERTISEMENT

’ಲಸಿಕೆ ವಿಷಯದಲ್ಲಿ ರಾಜ್ಯಗಳಿಗೆ ಸ್ವಾತಂತ್ರ್ಯ ನೀಡಬೇಕು ಎಂದು ಕೆಲವರು ವಾದಿಸಿದರು. ಸ್ವಾತಂತ್ರ್ಯ ನೀಡಿದಾಗ ಹೊಣೆ ನಿಭಾಯಿಸದೇ ಕೈಚೆಲ್ಲಿ ಕುಳಿತರು. ಪ್ರಧಾನಿ ಮೋದಿಯವರಿಗೆ ಸಿಗುತ್ತಿರುವ ಬೆಂಬಲದ ಕಾರಣ ಕೆಲವರು ಪಿಎಂ ಕೇರ್ಸ್‌ ಫಂಡ್‌ ಬಗ್ಗೆ ಅಸೂಯೆಯಿಂದ ಮಾತನಾಡುತ್ತಿದ್ದಾರೆ‘ ಎಂದರು.

’ಕೋವಿಡ್‌ನಿಂದ ದೇಶದಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ. ಎಲ್ಲೂ ಹೋಗಲು ಆಗುತ್ತಿಲ್ಲ, ಬೇಕಾದಂತೆ ನಡೆದುಕೊಳ್ಳಲು ಆಗುತ್ತಿಲ್ಲ. ಸಣ್ಣ ವ್ಯಾಪಾರಿಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ‘ ಎಂದು ಸಂತೋಷ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.