ಬೆಂಗಳೂರು: ‘ಸೂಫಿ ಪರಂಪರೆಗೆ ಬಹುದೊಡ್ಡ ಇತಿಹಾಸವಿದೆ. ಸೂಫಿ ಪಂಥದ ಕುರಿತು ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು. ಕಳೆದು ಹೋಗುತ್ತಿರುವ ಈ ಪರಂಪರೆ, ಸಂಸ್ಕೃತಿಯನ್ನು ಉಳಿಸಬೇಕಿದೆ’ ಎಂದು ಲೇಖಕಿ ಕೆ.ಷರೀಫಾ ಅಭಿಪ್ರಾಯಪಟ್ಟರು.
ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಅಲ್ಪಸಂಖ್ಯಾತರ ಕೋಶದ ಸಹಯೋಗದಲ್ಲಿ ಕನ್ನಡ ಅಧ್ಯಯನ ಕೇಂದ್ರ ಆಯೋಜಿಸಿದ್ದ ‘ಕರ್ನಾಟಕದ ಸೂಫಿಗಳು: ಸಾಹಿತ್ಯ ಮತ್ತು ಸಂಸ್ಕೃತಿ ಅನುಸಂಧಾನ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಸೂಫಿ ಸಂತರು ಶರಣರ ರೀತಿಯಲ್ಲಿ ಸಮಾಜಕ್ಕೆ ಸಂದೇಶ ಸಾರಿದ್ದಾರೆ. ಸೂಫಿ ಪಂಥದಲ್ಲಿ ಭೇದ, ಭಾವ, ಅಸೂಯೆಗಳಿಲ್ಲ’ ಎಂದು ವಿವರಿಸಿದರು. ನಂತರ ಕರ್ನಾಟಕದ ಸೂಫಿ ಸಂತರ ಪರಿಚಯ ಮಾಡುವ ಜೊತೆಗೆ, ಸೂಫಿಗಳ ಇತಿಹಾಸವನ್ನು ತಿಳಿಸಿದರು.
ಚಿಂತಕ ಬಂಜಗೆರೆ ಜಯಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಇಸ್ಲಾಂನಿಂದ ಹುಟ್ಟಿದ ದಾರ್ಶನಿಕ ಪಂಥವೇ ಸೂಫಿ. ಪ್ರೇಮವನ್ನು ಬಯಸುವುದು, ಪಸರಿಸುವುದು ಸೂಫಿ ಪಂಥ. ಇದು ಭಗವಂತನನ್ನು ಅರಿಯುವ, ಆಪ್ತನನ್ನಾಗಿಸುವ ಮಾರ್ಗವೂ ಹೌದು’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.