
ಯಲಹಂಕ: ಜನಪದ ಕಲೆಗಳ ಅನಾವರಣ, ರಾಶಿಪೂಜೆ, ಆಹಾರ ಮೇಳ, ಕುರಿ-ಎತ್ತುಗಳ ಪ್ರದರ್ಶನ, ಚಿತ್ತಾರದ ರಂಗೋಲಿ, ಬಾನಂಗಣದಲ್ಲಿ ಹಾರಾಡಿದ ಗಾಳಿಪಟ, ಗ್ರಾಮೀಣ ಕ್ರೀಡೆಗಳು, ವಸ್ತು ಪ್ರದರ್ಶನ, ಎತ್ತಿನ ಬಂಡಿಯಲ್ಲಿ ಸವಾರಿ...
ಕಂದಾಯ ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಬಿಜಿ ಸ್ವಯಂ ಸೇವಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಂಕ್ರಾಂತಿ ‘ಸುಗ್ಗಿ-ಹುಗ್ಗಿʼ ಸಾಂಸ್ಕೃತಿಕ ಸಂಭ್ರಮ ಆಚರಣೆಯಲ್ಲಿ ಕಂಡುಬಂದ ದೃಶ್ಯಗಳಿವು.
ಕಬಡ್ಡಿ, ಹಗ್ಗ-ಜಗ್ಗಾಟ, ರಂಗೋಲಿ, ಮಡಕೆ ಹೊಡೆಯುವ ಹಾಗೂ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಬ್ಬಿನ ಜಲ್ಲೆ ಮತ್ತು ಭತ್ತದ ತೆನೆಯಿಂದ ನಿರ್ಮಿಸಿದ್ದ ಮನೆ ಹಾಗೂ ವಿವಿಧ ಆಕಾರದ ಬೆಲ್ಲದ ಹಚ್ಚುಗಳು ಆಕರ್ಷಕವಾಗಿದ್ದವು. 30ಕ್ಕೂ ಅಧಿಕ ತಂಡಗಳು ಜನಪದ ಪ್ರದರ್ಶನ ನೀಡಿದವು. ಸಾರ್ವಜನಿಕರಿಗೆ ಎಳ್ಳು-ಬೆಲ್ಲ, ಅವರೇಕಾಯಿ, ಕಬ್ಬು, ಗೆಣಸು ಹಾಗೂ ಸಿಹಿ-ಖಾರ ಪೊಂಗಲ್ ವಿತರಿಸಲಾಯಿತು.
ವಸ್ತು ಪ್ರದರ್ಶನ: ಅವರೆಬೇಳೆ ಮೇಳ, ಗೃಹ ಉಪಯೋಗಿ ವಸ್ತುಗಳು, ಬಟ್ಟೆ, ಸಿರಿಧಾನ್ಯ, ಮಣ್ಣಿನ ಮಡಕೆ, ಪಿಒಪಿ ಬೊಂಬೆಗಳು, ಕೃತಕ ಆಭರಣಗಳು, ಸಿರಿಧಾನ್ಯಗಳು, ತಿಂಡಿ-ತಿನಿಸುಗಳು, ಸಾವಯವ ಪದಾರ್ಥಗಳು ಸೇರಿ ವೈವಿಧ್ಯಮಯ ಉತ್ಪನ್ನಗಳ 80ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಸಾವಿರಾರು ಜನರು ತಮ್ಮ ಮಕ್ಕಳೊಂದಿಗೆ ಹಳ್ಳಿ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು.
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಭೂಮಿ-ಪ್ರಕೃತಿಯನ್ನು ಆರಾಧಿಸುವುದು ನಮ್ಮ ಮೂಲ ಸಂಸ್ಕೃತಿ ಹಾಗೂ ಜನಪದ ಕಲೆಗಳನ್ನು ಉಳಿಸುವ ಹಾಗೂ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದಕ್ಕಾಗಿ ಸುಗ್ಗಿ-ಹುಗ್ಗಿ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಕೃಷ್ಣ ಬೈರೇಗೌಡ, ಕಾಂಗ್ರೆಸ್ ಮುಖಂಡರಾದ ಎನ್.ಎನ್. ಶ್ರೀನಿವಾಸಯ್ಯ, ಎಂ. ಜಯಗೋಪಾಲಗೌಡ, ಎನ್.ಕೆ. ಮಹೇಶ್‌ಕುಮಾರ್, ಪಿ.ವಿ. ಮಂಜುನಾಥಬಾಬು, ವಿ.ವಿ.ಪಾರ್ತಿಬರಾಜನ್, ವಿ.ಹರಿ, ಆರ್.ಎಂ. ಶ್ರೀನಿವಾಸ್, ಎಚ್.ಎ. ಶಿವಕುಮಾರ್, ಕೆ. ಗೌರೀಶ್, ಪಿ. ರಾಹುಲ್, ಉತ್ತನ ಹಳ್ಳಿ ಜಯಕುಮಾರ್, ಹನುಮಂತಿ ಉಪಸ್ಥಿತರಿದ್ದರು.