ADVERTISEMENT

ಎಫ್‌ಐಆರ್ ದಾಖಲಾದ ದಿನವೇ ಆತ್ಮಹತ್ಯೆ!

​ಪ್ರಜಾವಾಣಿ ವಾರ್ತೆ
Published 13 ಮೇ 2019, 19:59 IST
Last Updated 13 ಮೇ 2019, 19:59 IST
ಶ್ರೀನಿವಾಸ್ ರೆಡ್ಡಿ
ಶ್ರೀನಿವಾಸ್ ರೆಡ್ಡಿ   

ಬೆಂಗಳೂರು: ತಮ್ಮ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಾದ ದಿನವೇ ಅಂಚೆ ಸಹಾಯಕ ಎ.ವಿ.ಶ್ರೀನಿವಾಸ್ ರೆಡ್ಡಿ (29) ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಂಧ್ರಪ್ರದೇಶದ ಕಡಪ ಜಿಲ್ಲೆಯವರಾದ ಶ್ರೀನಿವಾಸ್, ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ (ಜಿಪಿಒ) ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ₹ 9.16 ಲಕ್ಷ ವಂಚಿಸಿದ ಸಂಬಂಧ ಅವರ ವಿರುದ್ಧ ಅಂಚೆ ಇಲಾಖೆ ಸಹಾಯಕ ಅಧೀಕ್ಷಕ ಬಿ.ಜಿ.ತಿಮ್ಮೋಜಿರಾವ್ ಶನಿವಾರ ದೂರು ಕೊಟ್ಟಿದ್ದರು.

ಶ್ರೀನಿವಾಸ್ ಪತ್ನಿ ದೀಪಿಕಾ ಏಳು ತಿಂಗಳ ಗರ್ಭಿಣಿಯಾಗಿದ್ದು, ಅನಂತಪುರದ ತಾಯಿ ಮನೆಯಲ್ಲಿದ್ದರು. ಶನಿವಾರ ಸಂಜೆ ಪತ್ನಿ ಜತೆ ಕೊನೆಯದಾಗಿ ಮಾತನಾಡಿದ್ದ ಅವರು, ನಂತರ ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿ ನೇಣಿಗೆ ಶರಣಾಗಿದ್ದಾರೆ.
ಭಾನುವಾರ ಸಂಜೆ ಸ್ನೇಹಿತ ಹರ್ಷ ಅವರು ಮನೆ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಆರೋಪ ಏನಿತ್ತು: ‘ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಹಣವನ್ನು ಇಎಂಒ ಮೂಲಕ ಫಲಾನುಭಾವಿಗಳಿಗೆ ಕಳುಹಿಸುವ ಹಾಗೂ ಫಲಾನುಭಾವಿಗಳಿಗೆ ಪಾವತಿಯಾಗದೆ ವಾಪಸ್ ಬಂದ ಹಣವನ್ನು ಸರ್ಕಾರದ ಖಜಾನೆಗೆ ಜಮೆ ಮಾಡುವ ಕೆಲಸಕ್ಕೆ ಶ್ರೀನಿವಾಸ್ ಅವರನ್ನು ನೇಮಿಸಲಾಗಿತ್ತು.’

‘ಇತ್ತೀಚೆಗೆ ಅವರು ₹ 9.16 ಲಕ್ಷ ಮೊತ್ತದ ಚೆಕ್ ಅನ್ನು ಸರ್ಕಾರದ ‌ಬ್ಯಾಂಕ್ ಖಾತೆಗೆ ಜಮೆ ಮಾಡದೆ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ತಮ್ಮ ಖಾತೆಗಳಿಗೆ ಜಮೆ ಮಾಡಿಕೊಂಡಿದ್ದರು. ಹೀಗಾಗಿ, ಶ್ರೀನಿವಾಸ್ ವಿರುದ್ಧ ಕ್ರಮ ಜರುಗಿಸಬೇಕು’ ಎಂದುಆಗ್ರಹಿಸಿ ತಿಮ್ಮೋಜಿರಾವ್ ದೂರು ಕೊಟ್ಟಿದ್ದರು.

ಗೌರವಕ್ಕೆ ಅಂಜಿ ಆತ್ಮಹತ್ಯೆ: ‘ಎಫ್‌ಐಆರ್ ದಾಖಲಿಸಿಕೊಂಡ ವಿಧಾನಸೌಧ ಠಾಣೆ ಸಿಬ್ಬಂದಿ, ಶ್ರೀನಿವಾಸ್‌ಗೆ ಕರೆ ಮಾಡಿ ವಿವರಣೆ ಕೇಳಿದ್ದರು.ತನಿಖೆ ಭೀತಿಯಿಂದ ಅಥವಾ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಅಂಜಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಹೆಬ್ಬಾಳ ಪೊಲೀಸರು ಹೇಳಿದ್ದಾರೆ.

‘ಯಾರೂ ಕಾರಣರಲ್ಲ’

‘ಕೆಲ ವೈಯಕ್ತಿಕ ಕಾರಣಗಳಿಂದ ಬೇಸತ್ತು ಸಾಯಲು ನಿರ್ಧರಿಸಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಶ್ರೀನಿವಾಸ್ ಮರಣ ಪತ್ರ ಬರೆದಿಟ್ಟಿದ್ದಾರೆ. ಪತ್ನಿ ದೀಪಿಕಾ ದೂರು ಕೊಟ್ಟಿದ್ದು, ಅವರೂ ಯಾರ ಮೇಲೂ ಸಂಶಯ ವ್ಯಕ್ತಪಡಿಸಿಲ್ಲ. ಹೀಗಾಗಿ, ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.