ADVERTISEMENT

ಯುವತಿ ಆತ್ಮಹತ್ಯೆ; ಪ್ರಿಯತಮನ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 2:50 IST
Last Updated 11 ಜನವರಿ 2021, 2:50 IST

ಬೆಂಗಳೂರು: ಆರ್‌.ಎಂ.ಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಜೆಮಿನಿ (19) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಅವರ ಪ್ರಿಯತಮ ಭರತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

’ಗೋರಗುಂಟೆಪಾಳ್ಯ ನಿವಾಸಿ ಜೆಮಿನಿ ಜ. 5ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಭರತ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜೆಮಿನಿ ಹಾಗೂ ಭರತ್ ಸ್ನೇಹಿತರು. ಸಲುಗೆ ಬೆಳೆದು ಇಬ್ಬರೂ ಪ್ರೀತಿಸಲಾರಂಭಿಸಿದ್ದರು. ಈ ವಿಚಾರ ತಿಳಿದ ತಾಯಿ ಶಶಿಕಲಾ, ಪುತ್ರಿಗೆ ಬುದ್ದಿವಾದ ಹೇಳಿದ್ದರು. ತಾಯಿ ಮಾತು ಧಿಕ್ಕರಿಸಿದ್ದ ಜೆಮಿನಿ, ಪ್ರೀತಿ ಮುಂದುವರಿಸಿದ್ದರು. ನೊಂದ ತಾಯಿ ನ. 18ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.’

ADVERTISEMENT

‘ತಾಯಿ ಆತ್ಮಹತ್ಯೆಯಿಂದ ಮಾನಸಿಕವಾಗಿ ನೊಂದಿದ್ದ ಜೆಮಿನಿ, ಭರತ್‌ನಿಂದ ದೂರವಾಗಿದ್ದರು. ಅಷ್ಟಾದರೂ ಯುವತಿಯ ಹಿಂದೆ ಬಿದ್ದಿದ್ದ ಆರೋಪಿ ಭರತ್, ಕಿರುಕುಳ ನೀಡಲಾರಂಭಿಸಿದ್ದ. ‘ನನ್ನನ್ನು ಮದುವೆಯಾಗಬೇಕು. ಇಲ್ಲದಿದ್ದರೆ, ನಿನ್ನ ಜೊತೆಗೆ ತೆಗೆಸಿಕೊಂಡಿರುವ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಎಂದೂ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ’ ಎಂದೂ ಪೊಲೀಸರು ಹೇಳಿದರು.

‘ಇತ್ತೀಚೆಗೆ ಮನೆಗೂ ಹೋಗಿ ಅವಾಚ್ಯ ಶಬ್ದಗಳಿಂದ ಯುವತಿಯನ್ನು ನಿಂದಿಸಿದ್ದ ಆರೋಪಿ, ಹಲ್ಲೆಯನ್ನೂ ಮಾಡಿದ್ದ. ಅದರಿಂದ ನೊಂದ ಯುವತಿ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿರುವುದು ಸದ್ಯದ ತನಿಖೆಯಿಂದ ಗೊತ್ತಾಗಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.