ADVERTISEMENT

ಪ್ರೊ.ಎಚ್‌.ಎ. ರಂಗನಾಥ್‌ಗೆ ‘ಸುಂದರ ಲಾಲ್‌ ಹೋರಾ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 16:36 IST
Last Updated 6 ಅಕ್ಟೋಬರ್ 2021, 16:36 IST
ಪ್ರೊ. ಎಚ್‌.ಎ. ರಂಗನಾಥ್‌
ಪ್ರೊ. ಎಚ್‌.ಎ. ರಂಗನಾಥ್‌   

ಬೆಂಗಳೂರು: ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ 2020ನೇ ಸಾಲಿನ ‘ಸುಂದರ್‌ ಲಾಲ್‌ ಹೋರಾ’ ಪ್ರಶಸ್ತಿಗೆ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ.ಎಚ್‌.ಎ. ರಂಗನಾಥ್‌ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ಪದಕ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ. ಪ್ರೊ. ರಂಗನಾಥ್‌ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗುವ ಮುನ್ನ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಣಿವಿಜ್ಞಾನದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ (ಎನ್‌ಎಎಸಿ) ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಈಗ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

ADVERTISEMENT

ವಂಶವಾಹಿ ಮತ್ತು ವಿಕಾಸದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಪ್ರೊ. ರಂಗನಾಥ್‌ ಅವರ ಹಲವಾರು ಲೇಖನಗಳು ಪ್ರಕಟವಾಗಿವೆ. ಪ್ರೊ. ರಂಗನಾಥ್‌ ಅವರು ಕೈಗೊಂಡ ಸಂಶೋಧನಾ ಯೋಜನೆಗಳಿಗೆ ಐಎನ್‌ಎಸ್‌ಎ, ಯುಜಿಸಿ, ಡಿಬಿಟಿ, ಡಿಎಸ್‌ಟಿ, ಡಿಎಫ್‌ಜಿ ಮತ್ತಿತರ ಸಂಸ್ಥೆಗಳು ಅನುದಾನ ನೀಡಿವೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ (ಎಐಸಿಟಿಇ) ಸೇರಿದಂತೆ ಕೇಂದ್ರ ಸರ್ಕಾರದ ಹಲವು ಸಮಿತಿಗಳಲ್ಲೂ ಪ್ರೊ. ರಂಗನಾಥ್‌ ಅವರು ಕಾರ್ಯನಿರ್ವಹಿಸಿದ್ದಾರೆ. ವೆಂಕಟೇಶ್ವರ ವಿಶ್ವವಿದ್ಯಾಲಯವು ರಂಗನಾಥ್‌ ಅವರಿಗೆ ಗೌರವ ‘ಡಾಕ್ಟರ್‌ ಆಫ್‌ ಸೈನ್ಸ್‌’ ಪದವಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.