ADVERTISEMENT

ಕೊಲೆಗೆ ₹3 ಲಕ್ಷಕ್ಕೆ ಸುಪಾರಿ: ಆರು ಆರೋಪಿಗಳನ್ನು ಬಂಧಿಸಿದ ಚಿಕ್ಕಜಾಲ ಪೊಲೀಸರು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 20:41 IST
Last Updated 16 ಏಪ್ರಿಲ್ 2024, 20:41 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಅಕ್ರಮ ಸಂಬಂಧದ ವಿಚಾರವಾಗಿ ವ್ಯಕ್ತಿಯ ಕೊಲೆಗೆ ಸುಪಾರಿ ನೀಡಿದ್ದ ಪ್ರಕರಣದಲ್ಲಿ ಆರು ಆರೋಪಿಗಳನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.

ಕೊಲೆಗೆ ಸುಪಾರಿ ನೀಡಿದ್ದ ಕೋಲಾರದ ಮಾಲೂರಿನ ಹೇಮಂತ್‌ ರೆಡ್ಡಿ(20), ಕೊಲೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಗಗನ್(19), ಬಾಲಾಜಿ(20) ಎಂಬುವರನ್ನು ಬಂಧಿಸಲಾಗಿದೆ. ಇನ್ನು ಮೂವರು ಅಪ್ರಾಪ್ತರನ್ನು ಬಾಲ ನ್ಯಾಯಮಂಡಳಿಗೆ ಎದುರು ಹಾಜರುಪಡಿಸಿ ಬಾಲಮಂದಿರಕ್ಕೆ ಬಿಡಲಾಗಿದೆ.

ADVERTISEMENT

‘ಆರೋಪಿಗಳಿಂದ ಟಾಟಾ ಸುಮೊ ವಾಹನ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನಗರದ ಕಂಪನಿಯೊಂದರಲ್ಲಿ ವಿತರಕನಾಗಿ ಕೆಲಸ ಮಾಡುತ್ತಿದ್ದ ಮೈಸೂರಿನ ಕಿಶೋರ್ ಅವರ ಕೊಲೆಗೆ ₹3 ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು’ ಎಂದು ಪೊಲೀಸರು ಹೇಳಿದರು.‌

‘ಏ.15ರಂದು ರಾತ್ರಿ 12 ಗಂಟೆಗೆ ಪಿಎಸ್ಐ ಶಿವಣ್ಣ ಅವರು ಗಸ್ತಿನಲ್ಲಿದ್ದರು. ಆಗ ಗಂಟಿಗಾನಹಳ್ಳಿ ಬಳಿಯ ಜಿಸಿಬಿಸಿ ಅಪಾರ್ಟ್‌ಮೆಂಟ್‌ ಬಳಿಯ ರಸ್ತೆ ಪಕ್ಕದ ಕತ್ತಲು ಪ್ರದೇಶದಲ್ಲಿ ಮಂಕಿ ಕ್ಯಾಪ್‌ ಧರಿಸಿದ್ದ ಐವರು ಅಪರಿಚಿತರು ಟಾಟಾ ಸುಮೊ ವಾಹನ ನಿಲ್ಲಿಸಿಕೊಂಡು ಕುಳಿತ್ತಿದ್ದರು. ಈ ವೇಳೆ ಅವರನ್ನು ಸುತ್ತುವರಿದು ವಶಕ್ಕೆ ಪಡೆದು ವಿಚಾರಣೆಗೆ ಮಾಡಿದಾಗ ಹಾರೋಹಳ್ಳಿಯ ಸಾಯಿಗ್ರೀನ್‌ ಪಾರ್ಕ್‌ ಲೇಔಟ್‌ ನಿವಾಸಿ ಕಿಶೋರ್‌ ಎಂಬಾತನ ಕೊಲೆಗೆ ಹೇಮಂತ್‌ ರೆಡ್ಡಿ ಎಂಬಾತ ಸುಪಾರಿ ನೀಡಿದ್ದ ಎಂದು ಒಪ್ಪಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

ಆರೋಪಿ ಹೇಮಂತ್‌ರೆಡ್ಡಿ ಅಕ್ಕ ಹಾಗೂ ಕಿಶೋರ್ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ನಡುವೆ ಸಲುಗೆ ಇತ್ತು ಎಂದು ಭಾವಿಸಿದ ಹೇಮಂತ್‌ರೆಡ್ಡಿ, ಕಿಶೋರ್‌ ಕೊಲೆಗೆ ಸಂಚು ರೂಪಿಸಿದ್ದ. ಈ ವಿಚಾರವನ್ನು ಗಗನ್ ಹಾಗೂ ಬಾಲಾಜಿಗೆ ತಿಳಿಸಿದ್ದ. ಆಗ ಸುಪಾರಿ ಮಾತುಕತೆ ನಡೆದಿತ್ತು ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.