ADVERTISEMENT

ನವ ಉದ್ಯಮ ಸ್ಥಾಪನೆಗೆ ಬೆಂಬಲ: ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ಹೂಡಿಕೆದಾರರು, ಉದ್ಯಮಿಗಳೊಂದಿಗೆ ಮುಖ್ಯಮಂತ್ರಿ ಸಂವಾದ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 19:37 IST
Last Updated 2 ಜೂನ್ 2022, 19:37 IST
ಬೆಂಗಳೂರಿನ ಹೋಟೆಲ್‌ ಕಾನ್ರಾಡ್‌ನಲ್ಲಿ ಗುರುವಾರ ‘ಜಾಗತಿಕ ಸ್ಟಾರ್ಟ್‌ ಅಪ್‌ ಸಮ್ಮೇಳನ’ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ವಿ.ವಿ.ನಾಯ್ಡು, ಹರಿ ಮೆನನ್‌ ಹಾಜರಿದ್ದರು
ಬೆಂಗಳೂರಿನ ಹೋಟೆಲ್‌ ಕಾನ್ರಾಡ್‌ನಲ್ಲಿ ಗುರುವಾರ ‘ಜಾಗತಿಕ ಸ್ಟಾರ್ಟ್‌ ಅಪ್‌ ಸಮ್ಮೇಳನ’ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ವಿ.ವಿ.ನಾಯ್ಡು, ಹರಿ ಮೆನನ್‌ ಹಾಜರಿದ್ದರು   

ಬೆಂಗಳೂರು: ‘ರಾಜ್ಯದಲ್ಲಿ ನವ ಉದ್ಯಮಗಳನ್ನು ಸ್ಥಾಪಿಸಲು ಸರ್ಕಾರದ ಸಂಪೂರ್ಣ ಬೆಂಬಲವಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲಿ ತಿಳಿಸಿದರು.

ನಗರದಲ್ಲಿ ಗುರುವಾರದಿಂದ ಆರಂಭ ವಾದ ‘ಜಾಗತಿಕ ಸ್ಟಾರ್ಟ್ ಅಪ್ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಟಾರ್ಟ್ ಅಪ್‍ಗಳಿಗೆ ಸದಾ ಸರ್ಕಾರದ ಬೆಂಬಲವಿದೆ. ಸ್ಟಾರ್ಟ್ ಅಪ್ ಆವಿಷ್ಕಾರದಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಫಾರ್ಚೂನ್ 500 ಕಂಪನಿಗಳ ಪೈಕಿ, 400 ಕಂಪನಿಗಳಿಗೆ ಬೆಂಗಳೂರು ನೆಲೆ ಒದಗಿಸಿದೆ ಎಂದು ಹೇಳಿದರು.

ADVERTISEMENT

‘ಸ್ಪರ್ಧೆಯ ಬಗ್ಗೆ ಚಿಂತಿಸುವುದಿಲ್ಲ. ಸಾಗುವ ದಾರಿಯಲ್ಲಿ ಸವಾಲುಗಳನ್ನು ಎದುರಿಸುತ್ತೇವೆ. ರಾಜ್ಯದಲ್ಲಿ ಹೂಡಿಕೆದಾರರನ್ನು ಸೆಳೆಯಲು ಎಲ್ಲ ರೀತಿಯಲ್ಲೂ ಪ್ರಯತ್ನ ಮುಂದುವರಿದಿದೆ’ ಎಂದು ಮುಖ್ಯಮಂತ್ರಿ ಹೇಳಿದರು.

ಡಿಜಿಟಲ್ ಎಕಾನಮಿ ಮಿಷನ್‌ ಅಧ್ಯಕ್ಷ ಬಿ.ವಿ.ನಾಯ್ಡು ಮಾತನಾಡಿ, ‘ಹೊಸ ಸಂಶೋಧನೆ, ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವು ಜಾಗತಿಕ ಕೇಂದ್ರವಾಗಿಸಲು ಅವಿರತ ಪ್ರಯತ್ನ ಮುಂದುವರಿಸಲಾಗಿದೆ. ನೀತಿ ನಿರೂಪಕರು ಮತ್ತು ಉದ್ಯಮದ ನಡುವೆ ಸೇತುವೆ ನಿರ್ಮಿಸಲು ಪ್ರಯತ್ನಿ ಸುತ್ತಿದ್ದೇವೆ’ ಎಂದು ತಿಳಿಸಿದರು. ದೇಶದಲ್ಲೇ ಸ್ಟಾರ್ಟ್ ಅಪ್ ನೀತಿಯನ್ನು ಪರಿಚಯಿಸಿದ ಮೊದಲ ರಾಜ್ಯ ಕರ್ನಾಟಕ ಎಂದು ಬಣ್ಣಿಸಿದರು.

ಸಮ್ಮೇಳನ ಉದ್ಘಾಟಿಸಿ ಸ್ಮಡ್ಜಾ ಅಧ್ಯಕ್ಷ ಕ್ಲೌಡ್ ಸ್ಮಡ್ಜಾ ಅವರು, ‘ಭಾರತವು ಈಗ ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟ್ ಅಪ್‌ ವ್ಯವಸ್ಥೆ ಹೊಂದಿದೆ. ಪ್ರಪಂಚದ ಹೊಸ ಸಿಲಿಕಾನ್ ವ್ಯಾಲಿಯಾಗಿ ಹೊರಹೊಮ್ಮಿರುವುದು ಒಳ್ಳೆಯ ಬೆಳವಣಿಗೆ‘ ಎಂದು ತಿಳಿಸಿದರು.

ಸಿಂಗಾಪುರ, ಇಸ್ರೇಲ್, ಜಪಾನ್, ಕೊರಿಯಾ ಮತ್ತು ಜರ್ಮನಿಯ ಅಂತರರಾಷ್ಟ್ರೀಯ ಹೂಡಿಕೆದಾರರು ಹಾಗೂ ಉದ್ಯಮಿಗಳು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಕ್ಯಾಟಮಾರನ್ ವೆಂಚರ್ಸ್ ಅಧ್ಯಕ್ಷ ಎಂ.ಡಿ.ರಂಗನಾಥ್, ಪ್ರಶಾಂತ್‌ ಪ್ರಕಾಶ್, ಬಿಗ್ ಬಾಸ್ಕೆಟ್ ಇಂಡಿಯಾದ ಸಹ ಸಂಸ್ಥಾಪಕ ಹರಿ ಮೆನನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.