ಬೆಂಗಳೂರು: ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವ ಜನ ವಿರೋಧಿ ನೀತಿಗಳನ್ನು ವಿರೋಧಿಸುವ ಸಲುವಾಗಿ ರೈತರು ಹಾಗೂ ಕಾರ್ಮಿಕರು ಇದೇ 10ರಂದು ದೇಶವ್ಯಾಪಿ ಹಮ್ಮಿಕೊಂಡಿರುವ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಿಳಿಸಿದೆ.
'ಕೇಂದ್ರ ಸರ್ಕಾರದ ದಮನಕಾರಿ ನೀತಿಗಳಿಂದ ದೇಶದ ದುಡಿಯುವ ಜನ ಇಂದು ಹೋರಾಟಕ್ಕೆ ಮುಂದಾಗಿದ್ದಾರೆ. ಜನವಿರೋಧಿ ನೀತಿಗಳ ವಿರುದ್ಧ ದನಿ ಎತ್ತುವವರನ್ನು ಜೈಲಿಗೆ ಕಳುಹಿಸುವ ಮೂಲಕ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆ ತೋರುತ್ತಿದೆ' ಎಂದು ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷೆ ದೇವಿ ದೂರಿದ್ದಾರೆ.
'ಉದ್ಯೋಗ ಖಾತರಿ ಯೋಜನೆಯಡಿ ಕನಿಷ್ಠ 200 ದಿನಗಳ ಕೆಲಸ ನೀಡಬೇಕು ಹಾಗೂ ದಿನಗೂಲಿಯನ್ನು ₹600ಕ್ಕೆ ಹೆಚ್ಚಳ ಮಾಡಬೇಕು. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವವರಿಗೆ ಪರಿಹಾರವಾಗಿ ಆರು ತಿಂಗಳವರೆಗೆ ₹7,500 ನೀಡಬೇಕು. ಸ್ವಸಹಾಯ ಸಂಘಗಳ ಸಾಲ ರದ್ದು ಮಾಡಬೇಕು' ಎಂದು ಅವರು ಒತ್ತಾಯಿಸಿದರು.
'ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಗಳನ್ನು ಜಾರಿ ಮಾಡುವ ಮೂಲಕ ರೈತರು, ಮಹಿಳೆಯರು ಹಾಗೂ ಕಾರ್ಮಿಕರನ್ನು ಬೀದಿಪಾಲು ಮಾಡಲು ಸರ್ಕಾರ ಹೊರಟಿದೆ. ಇದನ್ನು ಖಂಡಿಸಿ 'ಕ್ವಿಟ್ ಇಂಡಿಯಾ' ಚಳವಳಿ ಆರಂಭವಾದ ಚಾರಿತ್ರಿಕ ದಿನವಾದ ಆ.9ರಂದು ಕೂಡಾ ಹೋರಾಟ ನಡೆಯಲಿದೆ. ಇದರಲ್ಲಿ ಎಲ್ಲ ಜಿಲ್ಲೆಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.