ADVERTISEMENT

ಮೌಲ್ಯಗಳ ಪುನರ್‌ಪ್ರತಿಷ್ಠಾಪನೆ ಆಗಲಿ: ಶಿವರಾಜ ಪಾಟೀಲ

ತುಮಕೂರು ದೇವಾಲಯಗಳು ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 20:31 IST
Last Updated 13 ಜನವರಿ 2023, 20:31 IST
ನಗರದಲ್ಲಿ ಶುಕ್ರವಾರ ಉದಯ ಪ್ರಕಾಶನ ಹಮ್ಮಿಕೊಂಡಿದ್ದ ‘ತುಮಕೂರು ಜಿಲ್ಲೆಯ ಪ್ರಮುಖ ದೇವಾಲಯಗಳು’ ಸಂಶೋಧನಾ ಗ್ರಂಥವನ್ನು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಬಿಡುಗಡೆ ಮಾಡಿದರು. ಅರಳುಮಲ್ಲಿಗೆ ಪಾರ್ಥಸಾರಥಿ, ಕೆ.ಜಿ.ಲಕ್ಷ್ಮೀನಾರಾಯಣಪ್ಪ, ಎನ್‌.ಕುಮಾರ್ ಇದ್ದರು.     – ಪ್ರಜಾವಾಣಿ ಚಿತ್ರ.
ನಗರದಲ್ಲಿ ಶುಕ್ರವಾರ ಉದಯ ಪ್ರಕಾಶನ ಹಮ್ಮಿಕೊಂಡಿದ್ದ ‘ತುಮಕೂರು ಜಿಲ್ಲೆಯ ಪ್ರಮುಖ ದೇವಾಲಯಗಳು’ ಸಂಶೋಧನಾ ಗ್ರಂಥವನ್ನು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಬಿಡುಗಡೆ ಮಾಡಿದರು. ಅರಳುಮಲ್ಲಿಗೆ ಪಾರ್ಥಸಾರಥಿ, ಕೆ.ಜಿ.ಲಕ್ಷ್ಮೀನಾರಾಯಣಪ್ಪ, ಎನ್‌.ಕುಮಾರ್ ಇದ್ದರು.     – ಪ್ರಜಾವಾಣಿ ಚಿತ್ರ.   

ಬೆಂಗಳೂರು: ಸಮಾಜದಲ್ಲಿ ಕುಸಿಯುತ್ತಿರುವ ಮೌಲ್ಯಗಳನ್ನು ಪುನರ್‌ಪ್ರತಿಷ್ಠಾಪಿಸುವ ಕೇಂದ್ರಗಳಾಗಿ ದೇವಾಲಯಗಳು ಬಳಕೆಯಾಗಬೇಕು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಹೇಳಿದರು.

ನಗರದಲ್ಲಿ ಶುಕ್ರವಾರ ಉದಯ ಪ್ರಕಾಶನ ಹಮ್ಮಿಕೊಂಡಿದ್ದ ಕೆ.ಜಿ.ಲಕ್ಷ್ಮಿನಾರಾಯಣಪ್ಪ ಅವರ ‘ತುಮಕೂರು ಜಿಲ್ಲೆಯ ಪ್ರಮುಖ ದೇವಾಲಯಗಳು’ ಸಂಶೋಧನಾ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮಂದಿರಗಳನ್ನು ವಿದೇಶಿಯರು ಕಲೆ, ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡುತ್ತಾರೆ. ಭಕ್ತಿ ಕೇಂದ್ರಗಳಿಗೆ ತೆರಳುವ ಭಾರತೀಯರು ಸಹ ಧಾರ್ಮಿಕ ಮನೋಭಾವನೆ ಇಟ್ಟುಕೊಳ್ಳುವುದಲ್ಲದೆ, ನಮ್ಮ ನೆಲದ ಸಂಸ್ಕೃತಿ, ಪರಂಪರೆ, ಜ್ಞಾನ ದಾಸೋಹದ ತಾಣಗಳಂತೆ ಅವನ್ನು ಕಾಣಬೇಕು. ದೇವಾಲಯಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಬರುತ್ತಾರೆ. ಹಾಗಾಗಿ, ಅಲ್ಲೇ ನೈತಿಕ ಮೌಲ್ಯಗಳನ್ನು ರೂಢಿಸಬೇಕು ಎಂದರು.

ADVERTISEMENT

ಶಾಲೆ, ಕಾಲೇಜುಗಳ ಪಠ್ಯಗಳಲ್ಲಿ ನೀತಿ ಶಾಸ್ತ್ರ ಅಳವಡಿಸಬೇಕು. ಬಾಲ್ಯದಿಂದಲೇ ನೈತಿಕ ಮೌಲ್ಯಗಳನ್ನು ಕಲಿಸಬೇಕು. ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಓದಿದ ಪುಸ್ತಕ ಕುರಿತು ಇತರರ ಜತೆ ಮಾಹಿತಿ ಹಂಚುವ ಪರಿಪಾಟ ಇರಬೇಕು. ನಶಿಸುತ್ತಿರುವ ಪುಸ್ತಕ ಸಂಸ್ಕೃತಿ ಉಳಿಸಬೇಕು ಎಂದು ಸಲಹೆ ನೀಡಿದರು.

ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್‌, ಸಂಶೋಧಕ ಎಂ.ಚಿದಾನಂದಮೂರ್ತಿ ಅವರ ಆಶಯದಂತೆ ಲಕ್ಷ್ಮೀನಾರಾಯಣಪ್ಪ ಅವರು ದೇಗುಲಗಳ ಕುರಿತು ಅತ್ಯುತ್ತಮ ಸಂಶೋಧನೆ ಮಾಡಿದ್ದಾರೆ. ಜೈನ, ಶೈವ, ವೀರಶೈವ ಪರಂಪರೆಯ ದೇಗುಲಗಳ ಮಾಹಿತಿ ಒಗ್ಗೂಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್, ತುಮಕೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ವೈ.ಎನ್.ಸಿದ್ದೇಗೌಡ, ಹಿರಿಯ ಸಾಹಿತಿ ಅರಳು ಮಲ್ಲಿಗೆ ಪಾರ್ಥಸಾರಥಿ, ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಕೇಂದ್ರ ತೆರಿಗೆ ಇಲಾಖೆ ಹೆಚ್ಚುವರಿ ಮಹಾನಿರ್ದೇಶಕ ನಾರಾಯಣಸ್ವಾಮಿ, ಉದಯ ಪ್ರಕಾಶನದ ಶೈಲಜಾ ಹೆಗಡೆ, ಸಂಶೋಧಕ ಕೆ.ಜಿ.ನಾರಾಯಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.