ADVERTISEMENT

ಸುರಂಜನದಾಸ್ ರಸ್ತೆ ಮರಗಳ ಹನನ: ಪುನರ್ ಪರಿಶೀಲನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 19:55 IST
Last Updated 29 ಜುಲೈ 2021, 19:55 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಸುರಂಜನದಾಸ್ ರಸ್ತೆಯಲ್ಲಿ ಕೆಳಸೇತುವೆ ನಿರ್ಮಿಸಲು ಮರಗಳನ್ನು ಕಡಿಯುವ ಸಂಬಂಧ ಸ್ಥಳ ಪರಿಶೀಲನೆಯನ್ನು ಮತ್ತೊಮ್ಮೆ ನಡೆಸುವಂತೆ ಮರಗಳ ತಜ್ಞರ ಸಮಿತಿಗೆ (ಟಿಇಸಿ) ಹೈಕೋರ್ಟ್ ನಿರ್ದೇಶನ ನೀಡಿದೆ.

ಮರ ಕಡಿಯಲು ಬಿಬಿಎಂಪಿ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಸ್ವಾತಿ ದಾಮೋದರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.

‘ಮರ ಕಡಿಯುವ ಸಂಬಂಧ ಸಲ್ಲಿಕೆಯಾಗುವ ಅರ್ಜಿಗಳನ್ನು ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅನುಮತಿ ನೀಡುವುದು ಸಮಿತಿಯ ಕರ್ತವ್ಯ. ಯೋಜನೆಗೆ ಅಡ್ಡಿಯಾಗದಿದ್ದರೆ ಅಂತಹ ಮರಗಳನ್ನು ಉಳಿಸಬೇಕು. ಈ ರೀತಿಯ ಪ್ರಕ್ರಿಯೆಯನ್ನು ಸಮಿತಿ ನಡೆಸಿದಂತೆ ಕಾಣಿಸುತ್ತಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.

ADVERTISEMENT

‘ಸಮಿತಿಯು ವಾಸ್ತವ ಗಮನಿಸದೆ ಯಾಂತ್ರಿಕವಾಗಿ ವರ್ತಿಸುತ್ತಿದೆ. ಹೀಗಾಗಿಯೇ ಬಿಬಿಎಂಪಿ ಪರವಾಗಿ ವರದಿ ನೀಡಿದೆ’ ಎಂದು ಅರ್ಜಿದಾರರ ಪರ ವಕೀಲರು ಆರೋಪಿಸಿದರು.

‘ಸಂಪೂರ್ಣ ಪ್ರಕ್ರಿಯೆಯನ್ನು ಪುನರ್ ಆರಂಭಿಸಿ ವರದಿ ನೀಡಬೇಕು. ನ್ಯಾಯಾಲಯವೂ ವರದಿ ಪರಿಶೀಲನೆ ನಡೆಸಲಿದೆ. ಆ ತನಕ ಮರ ಕಡಿಯಬಾರದು’ ಎಂದು ಪೀಠ ತಿಳಿಸಿತು.

ಕಮಾಂಡೋ ಆಸ್ಪತ್ರೆಯಿಂದ ಹೋಪ್‌ ಫಾರ್ಮ್ ತನಕ ಸಿಗ್ನಲ್ ರಹಿತ ಕಾರಿಡಾರ್ ನಿರ್ಮಾಣಕ್ಕಾಗಿ ಅಂಡರ್ ಪಾಸ್ ನಿರ್ಮಾಣ ಮಾಡುವ ಉದ್ದೇಶ ಇದೆ. ಅದಕ್ಕಾಗಿ 25 ಮರಗಳನ್ನು ಕಡಿಯಲು ಮತ್ತು 7 ಮರಗಳನ್ನು ಸ್ಥಳಾಂತರಿಸಲು ಬಿಬಿಎಂಪಿ ಮುಂದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.