ADVERTISEMENT

ಶಸ್ತ್ರಚಿಕಿತ್ಸೆ: ತಜ್ಞರ ಸಲಹೆಗೆ ಸಹಾಯವಾಣಿ

ವರುಣ ಹೆಗಡೆ
Published 11 ಜನವರಿ 2025, 23:30 IST
Last Updated 11 ಜನವರಿ 2025, 23:30 IST
   

ಬೆಂಗಳೂರು: ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಉಚಿತ ಸಹಾಯವಾಣಿಯ ಅಡಿ ತಜ್ಞ ವೈದ್ಯರು ಎರಡನೇ ವೈದ್ಯಕೀಯ ಅಭಿಪ್ರಾಯ ಒದಗಿಸಲಾಗುತ್ತಿದೆ.

ಈ ಸಹಾಯವಾಣಿಯ ಅಡಿ ಒಂದೂವರೆ ತಿಂಗಳಲ್ಲಿ 90ಕ್ಕೂ ಅಧಿಕ ಮಂದಿಗೆ ಶಸ್ತ್ರಚಿಕಿತ್ಸೆ ಬಗೆಗಿನ ಗೊಂದಲ ನಿವಾರಿಸಲಾಗಿದೆ.

ಶಸ್ತ್ರಚಿಕಿತ್ಸೆಗಳ ಅಗತ್ಯದ ಬಗ್ಗೆ ಗೊಂದಲಗಳು ಇರುವುದರಿಂದ, ಮೊಣಕಾಲು ಹಾಗೂ ಸೊಂಟದ ಕೀಲು ಬದಲಾವಣೆಯಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳಿಗೆ ಎರಡನೇ ಅಭಿಪ್ರಾಯ ಒದಗಿಸಲು ಇಲಾಖೆಯು ನವೆಂಬರ್ ತಿಂಗಳಲ್ಲಿ ಯೋಜನೆ ಪ್ರಾರಂಭಿಸಿತ್ತು.

ADVERTISEMENT

ಯೋಜನೆಯ ಅಡಿ ಇಲಾಖೆಯು ಗುರುತಿಸಿದ ವೈದ್ಯಕೀಯ ತಜ್ಞರು ರೋಗಿಯ ದಾಖಲಾತಿ ಹಾಗೂ ಸಮಸ್ಯೆಯ ತೀವ್ರತೆ ಬಗ್ಗೆ ಪರಿಶೀಲಿಸಿ, ಅಗತ್ಯ ಸಲಹೆ ಒದಗಿಸುತ್ತಿದ್ದಾರೆ. ವಾರದ ಎಲ್ಲ ದಿನಗಳು 24 ಗಂಟೆ ಈ ಸೇವೆ ಲಭ್ಯವಾಗುತ್ತಿದೆ. ಕರೆ ಮಾಡುತ್ತಿರುವವರಲ್ಲಿ ಹೆಚ್ಚಿನವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರೇ ಆಗಿದ್ದಾರೆ.

ಮೊಣಕಾಲು, ಸೊಂಟದ ಕೀಲು ಬದಲಿ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ. ಕೆಲವರು ಆರ್ಥಿಕ ಸಮಸ್ಯೆಯ ಕಾರಣದಿಂದಲೂ ಶಸ್ತ್ರಚಿಕಿತ್ಸೆಯ ಅಗತ್ಯದ ಬಗ್ಗೆ ಎರಡನೇ ಅಭಿಪ್ರಾಯಕ್ಕೆ ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ. ಈ ಸಹಾಯವಾಣಿ ಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಾಸ್ಟ್) ನಿರ್ವಹಿಸುತ್ತಿದೆ.

ದಾಖಲಾತಿ ಹಂಚಿಕೊಳ್ಳಲು ಅವಕಾಶ: ಶಸ್ತ್ರಚಿಕಿತ್ಸೆ ಕುರಿತು ಎರಡನೇ ಅಭಿಪ್ರಾಯ ಪಡೆಯಲು ಬಯಸುವವರು ಸಹಾಯವಾಣಿ ಸಂಖ್ಯೆ 1800 4258 330 ಸಂಪರ್ಕಿಸಬಹುದು. ಶಸ್ತ್ರಚಿಕಿತ್ಸೆಗೆ ತಯಾರಿ, ಚೇತರಿಕೆಯ ಸಮಯ ಮತ್ತು ಶಸ್ತ್ರಚಿಕಿತ್ಸೆ ನಂತರದ ಅವಧಿಯಲ್ಲಿನ ಆರೈಕೆ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ. ತಜ್ಞ ವೈದ್ಯರ ಎರಡನೇ ಅಭಿಪ್ರಾಯಕ್ಕೆ ಅಗತ್ಯ ವೈದ್ಯಕೀಯ ದಾಖಲಾತಿ ಒದಗಿಸಲು ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಒದಗಿಸಲಾಗುತ್ತದೆ. ಈ ಸಂಖ್ಯೆಗೆ ವೈದ್ಯಕೀಯ ದಾಖಲಾತಿ
ಗಳನ್ನು ಕಳುಹಿಸಿದ 48 ಗಂಟೆಗಳಲ್ಲಿ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಯನ್ನು ಸಂಪರ್ಕಿಸಿ, ಎರಡನೇ ಅಭಿಪ್ರಾಯ ಒದಗಿಸಲಾಗುತ್ತದೆ.

‘ಸಂಧಿವಾತ, ವಯಸ್ಸಿಗೆ ಸಂಬಂಧಿಸಿದ ಕೀಲುಗಳ ಕ್ಷೀಣತೆ ಮತ್ತು ಗಾಯಗಳಿಂದ ಮೊಣಕಾಲು ಹಾಗೂ ಸೊಂಟದ ಕೀಲು ಬದಲಾವಣೆ ಅಂತಹ ಶಸ್ತ್ರಚಿಕಿತ್ಸೆಗಳು ಹೆಚ್ಚುತ್ತಿವೆ. ರೋಗಿಗಳ ಕಡೆಯವರು ಶಸ್ತ್ರಚಿಕಿತ್ಸೆ ಅವಶ್ಯತೆ ಕುರಿತು ಸಲಹೆ ಪಡೆಯಬಹುದಾಗಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿ
ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಕುರಿತು ಗೊಂದಲವಿದ್ದಲ್ಲಿ ಸಹಾಯವಾಣಿ ಮೂಲಕ, ಉಚಿತವಾಗಿ ಸಲಹೆ ಪಡೆಯಬಹುದು. ತಜ್ಞವೈದ್ಯರ ಮಾರ್ಗದರ್ಶನವೂ ಲಭ್ಯ.
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಇತರ ಶಸ್ತ್ರಚಿಕಿತ್ಸೆಗಳಿಗೂ ವಿಸ್ತರಣೆ
ಸಹಾಯವಾಣಿ ಮೂಲಕ ಸದ್ಯ ಮೊಣಕಾಲು ಹಾಗೂ ಸೊಂಟದ ಕೀಲು ಬದಲಾವಣೆ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳ ಬಗ್ಗೆ ಮಾತ್ರ ಎರಡನೇ ಅಭಿಪ್ರಾಯ ಒದಗಿಸಲಾಗುತ್ತಿದೆ. ಮುಂದೆ ಬೇರೆ ಸಮಸ್ಯೆಗಳಿಗೆ ಸಂಬಂಧಿಸಿದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳಿಗೂ ಈ ಸೇವೆ ವಿಸ್ತರಿಸಲು ಇಲಾಖೆ ಯೋಜನೆ ರೂಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.