ADVERTISEMENT

ಸಮೀಕ್ಷೆಗೆ ಗೈರಾದರೆ ಶಿಸ್ತು ಕ್ರಮ; ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌

ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ಹಾಜರಾಗದವರರ ವಿರುದ್ಧ ಕ್ರಮ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 19:51 IST
Last Updated 14 ಅಕ್ಟೋಬರ್ 2025, 19:51 IST
ಜಿಬಿಎ
ಜಿಬಿಎ   

ಬೆಂಗಳೂರು: ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆಗೆ ಗೈರು ಹಾಜರಾಗುತ್ತಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್ ಹೇಳಿದರು.

ನಗರದಲ್ಲಿ ಸುಮಾರು 46 ಲಕ್ಷ ಮನೆಗಳಲ್ಲಿ ಸಮೀಕ್ಷೆ ನಡೆಸಬೇಕಾಗಿದ್ದು, 21 ಸಾವಿರ ಸಮೀಕ್ಷಕರನ್ನು ನಿಯೋಜಿಸಲಾಗಿದೆ. ಇದರಲ್ಲಿ 18 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಅವರು ಪ್ರಶಂಸೆಗೆ ಅರ್ಹರಾಗಿದ್ದಾರೆ ಎಂದರು.

ಗರ್ಭಿಣಿಯರು, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವುಳ್ಳ ತಾಯಂದಿರು ಹಾಗೂ ಗಂಭೀರ ಆರೋಗ್ಯ ಸಮಸ್ಯೆಯುಳ್ಳ ಸಮೀಕ್ಷಾದಾರರನ್ನು ಸಮೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.

ADVERTISEMENT

ಆದರೆ, ಉಳಿದವರಿಗೆ ಪ್ರತಿದಿನ ಪದೇ ಪದೇ ನೋಟೀಸ್‌ ಹಾಗೂ ಎಸ್ಎಂಎಸ್‌ ಮೂಲಕ ಸಂದೇಶ ಕಳುಹಿಸುತ್ತಿದ್ದರೂ 2,300 ಸಮೀಕ್ಷದಾರರು ಯಾವುದೇ ಕಾರಣ ನೀಡದೆ, ಅನಧಿಕೃತವಾಗಿ ಗೈರುಹಾಜರಿದ್ದಾರೆ. ಇದು ಗಂಭೀರ ಶಿಸ್ತುಉಲ್ಲಂಘನೆಯಾಗಿದೆ. ಆದ್ದರಿಂದ ಅನಧಿಕೃತ ಗೈರುಹಾಜರಿ ಅವಧಿಯ ವೇತನ ನೀಡದಂತೆ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ ಎಂದರು.

‘ಸಮೀಕ್ಷೆ ಕಾರ್ಯಕ್ಕೆ ತಕ್ಷಣ ಹಾಜರಾಗಿ, ತಮಗೆ ಹಂಚಿಕೆಯಾಗಿರುವ ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ, ಅನಧಿಕೃತವಾಗಿ ಗೈರಾಗಿರುವ ಸಮೀಕ್ಷಾದಾರರ ವಿರುದ್ಧ ಪ್ರತಿದಿನ ಕ್ರಮ ಕೈಗೊಳ್ಳಲಾಗುತ್ತದೆ. ಗೈರುಹಾಜರಾಗುವುದನ್ನು ಮುಂದುವರಿಸಿದರೆ ಅಮಾನತು ಸೇರಿದಂತೆ ಶಿಸ್ತು ಕ್ರಮಕ್ಕೆ ಅವರೇ ಹೊಣೆಗಾರರಾಗಿರುತ್ತಾರೆ’ ಎಂದರು.

14.27 ಲಕ್ಷ ಮನೆ ಸಮೀಕ್ಷೆ: ಜಿಬಿಎ ವ್ಯಾಪ್ತಿಯಲ್ಲಿ ಅ.14ರ ಅಂತ್ಯಕ್ಕೆ 14.27,759 ಲಕ್ಷ ಮನೆಗಳಲ್ಲಿ ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದೆ. ಅ.14ರಂದು 1,07,006 ಮನೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

ಕೇಂದ್ರ ನಗರ ಪಾಲಿಕೆಯಲ್ಲಿ 1,87,085, ಪೂರ್ವ ನಗರ ಪಾಲಿಕೆಯಲ್ಲಿ 2,16,538, ಉತ್ತರ ನಗರ ಪಾಲಿಕೆಯಲ್ಲಿ 3,47,416, ದಕ್ಷಿಣ ನಗರ ಪಾಲಿಕೆಯಲ್ಲಿ 2,57,549, ಪಶ್ಚಿಮ ನಗರ ಪಾಲಿಕೆಯಲ್ಲಿ 4,19,171 ಮನೆಗಳಲ್ಲಿ ಈವರೆಗೆ ಸಮೀಕ್ಷೆ ನಡೆಸಲಾಗಿದೆ.

‘ಸಮೀಕ್ಷೆ ಕಾರ್ಯ ನಿರೀಕ್ಷಿತ ಮಟ್ಟದಲ್ಲಿಲ್ಲ’

‘ಜಿಬಿಎ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ಕಾರ್ಯ ನಿರೀಕ್ಷಿತ ರೀತಿಯಲ್ಲಿ
ಆಗುತ್ತಿಲ್ಲ. ಜಿಬಿಎ ಮುಖ್ಯ ಆಯುಕ್ತರು, ನಗರ ಪಾಲಿಕೆಗಳ ಆಯುಕ್ತರು ಸಮೀಕ್ಷೆಯ ಪ್ರಗತಿ ಬಗ್ಗೆ ಗಮನ ಹರಿಸಬೇಕು’ ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಸೂಚಿಸಿದ್ದಾರೆ.

‘ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸಮೀಕ್ಷಕರೊಬ್ಬರು ಪ್ರತಿ ದಿನ 16 ಮನೆಗಳನ್ನು
ಪೂರ್ಣಗೊಳಿಸುತ್ತಾರೆ ಎಂದು ತಿಳಿಸಲಾಗಿತ್ತು. ಅದರಂತೆ ನಡೆದರೆ, ಅಕ್ಟೋಬರ್‌ 18 ಅಥವಾ 19ರೊಳಗೆ ಸಮೀಕ್ಷೆ ಪೂರ್ಣಗೊಳ್ಳುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಅ.13ರ ವೇಳೆಗೆ ಶೇ 30ರಷ್ಟು ಮನೆಗಳ ಸಮೀಕ್ಷೆ ಮಾತ್ರ ‍ಪೂರ್ಣಗೊಂಡಿದೆ. ಸಮೀಕ್ಷಕರೊಬ್ಬರು ದಿನಕ್ಕೆ 7ರಿಂದ 8 ಮನೆಗಳಷ್ಟೇ ಸಮೀಕ್ಷೆ ನಡೆಸುತ್ತಿದ್ದಾರೆ. ಅವರ ಮೇಲ್ವಿಚಾರಕರ ಕಾರ್ಯ ದಕ್ಷತೆಯಲ್ಲಿ ಕೊರತೆಯಾಗಿರುವುದು ಗೋಚರಿಸುತ್ತಿದೆ’ ಎಂದಿದ್ದಾರೆ. ‘ಸಮೀಕ್ಷೆ ಅವಧಿಯನ್ನು ವಿಸ್ತರಿಸುವುದು ತುಂಬಾ ಕಷ್ಟಕರವಾಗಿದ್ದು, ಸಮೀಕ್ಷಕರಿಗೆ ನೀಡಿರುವ ಇಲಾಖೆಗಳ ಕೆಲಸ ಕಾರ್ಯದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ, ಕೂಡಲೇ ಈ ಬಗ್ಗೆ ಗಮನಹರಿಸಬೇಕು’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.